ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 75 ವರ್ಷದ ವೃದ್ಧೆಗೆ ಕೊರೊನಾ ಪಾಸಿಟಿವ್ ಆಗಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಕೊರೊನಾ ಪತ್ತೆಯಾದ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯನ್ನು ಪೂರ್ತಿ ಜಿಲ್ಲಾಡಳಿತ ವಶಕ್ಕೆ ಪಡೆದಿದ್ದು ಐಸೋಲೇಶನ್ ವಾರ್ಡ್ ಆಗಿ ಕನ್ವರ್ಟ್ ಮಾಡಿದೆ. ಅಲ್ಲದೆ, ಅದರಲ್ಲಿರುವ ರೋಗಿಗಳನ್ನು ಅಲ್ಲಿಯೇ ಉಳಿಸಿಕೊಂಡು ರೋಗಿ ಮತ್ತು ಎಲ್ಲ ವೈದ್ಯಕೀಯ ಸಿಬಂದಿಯನ್ನು ಕ್ವಾರಂಟೈನ್ ಒಳಪಡಿಸಲಾಗಿದೆ.
ಇವರೆಲ್ಲರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಆಸ್ಪತ್ರೆ ಕಟ್ಟಡ ಇರುವ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಈ ಆಸ್ಪತ್ರೆ ಕಟ್ಟಡ ಇರುವುದರಿಂದ ಮತ್ತು ಈ ಪ್ರದೇಶ ನಿಷೇಧಿತ ವಲಯ ಆಗಿ ಘೋಷಣೆ ಆಗಿರುವುದು ಅಗತ್ಯ ವಾಹನ ಸಂಚಾರಕ್ಕೂ ತೊಡಕಾಗಲಿದೆ.
ಅಲ್ಲದೆ, ಅಡ್ಯಾರ್ ಸುತ್ತಮುತ್ತಲಿನ ಐದು ಕಿಮೀ ವ್ತಾಪ್ತಿಯನ್ನು ಬಫರ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಫರಂಗಿಪೇಟೆ, ಕುಡುಪು, ಕಲ್ಲಾಪು, ಫಳ್ನೀರ್ ಭಾಗದ ವರೆಗೂ ಈ ಬಫರ್ ಝೋನ್ ಇದ್ದು ಈ ವ್ಯಾಪ್ತಿಯಲ್ಲಿ 42ಸಾವಿರ ಮನೆಗಳು, 1800 ಅಂಗಡಿ, ಇನ್ನಿತರ ಕಚೇರಿಗಳು ಮತ್ತು 1.8 ಲಕ್ಷ ಜನರು ಒಳಗೊಳ್ಳಲಿದ್ದಾರೆ. ವೃದ್ಧ ಮಹಿಳೆ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು ಎಪ್ರಿಲ್ 18ರಂದು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದರು. ಈಕೆ ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಅತ್ತೆಯಾಗಿದ್ದು ಒಂದೇ ಮನೆಯಲ್ಲಿ ವಾಸವಿದ್ದರು.