ನವದೆಹಲಿ: ಗುರುವಾರದಂದು ದೇಶವು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಹಲವಾರು ‘ಪ್ರಥಮ’ಗಳಿಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾಗರಿಕರು ಇದೇ ‘ಮೊದಲ’ ಬಾರಿಗೆ ಹಲವು ವಿಷಯಗಳನ್ನು ನೋಡಿದ್ದಾರೆ.
ಇದೇ ಮೊದಲ ಬಾರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.
ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಧ್ವಜವನ್ನು ಬಿಚ್ಚಿ, ಮೆರವಣಿಗೆ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ.
ಕಳೆದ ವರ್ಷ ಕರ್ತವ್ಯ ಪಥ್ ಎಂದು ಮರುನಾಮಕರಣಗೊಂಡ ರಾಜಪಥದಲ್ಲಿ ಮೊದಲ ಬಾರಿಗೆ ಭಾರತ ನಿರ್ಮಿತ ಟ್ಯಾಂಕ್ಗಳು, ಬಂದೂಕುಗಳು ಕಾಣಿಸಿಕೊಂಡಿವೆ. ಅಲ್ಲದೆ, ಎಲ್ಲಾ ಅಧಿಕೃತ ಆಹ್ವಾನಗಳನ್ನು ಆನ್ಲೈನ್ ಮೂಲಕವೆ ಕಳುಹಿಸಿ ಇತಿಹಾಸ ನಿರ್ಮಿಸಲಾಗಿದೆ.
2023 ರ ಮೊದಲು, ಮೆರವಣಿಗೆಯ ಮೊದಲು ಭಾರತದ ರಾಷ್ಟ್ರಪತಿಗಳಿಗೆ 21-ಗನ್ ಸೆಲ್ಯೂಟ್ ನೀಡಲು ರಾಣಿ ಕಾಲದ ಬ್ರಿಟಿಷ್ ಬಂದೂಕುಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಮೇಕ್ ಇನ್ ಇಂಡಿಯಾ ಯೋಜನೆಯಡಿ, ಸ್ವದೇಶಿ ನಿರ್ಮಿತ 105 ಎಂಎಂ ಫೀಲ್ಡ್ ಗನ್ಗಳನ್ನು ಬಳಸಲಾಗಿದೆ.
40 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕಾಪಡೆಯ ಐಎಲ್-38, ವಿಚಕ್ಷಣ ಸಾಗರ ವಿಮಾನವು ಪ್ರಪ್ರಥಮ ಬಾರಿಗೆ ಪಥ ಸಂಚಲದಲ್ಲಿ ಭಾಗವಹಿಸಿದೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನ ಒಂಟೆ ತುಕಡಿಯು ಇದೇ ಮೊದಲ ಬಾರಿಗೆ ಮಹಿಳೆಯರನ್ನು ಹೊಂದಿದೆ.
ಇದೇ ಮೊದಲ ಬಾರಿಗೆ “ಸಾಮಾನ್ಯ ಜನರ ಭಾಗವಹಿಸುವಿಕೆ” ಎಂಬ ಥೀಮ್ ನೊಂದಿಗೆ ವೀಕ್ಷಕರ ಗ್ಯಾಲರಿಯನ್ನು ಶ್ರಮಯೋಗಿಗಳಾದ ಸೆಂಟ್ರಲ್ ವಿಸ್ತಾ ಕಾರ್ಮಿಕರಿಗೆ, ಆಟೋ ರಿಕ್ಷಾ ಚಾಲಕರಿಗೆ, ಸ್ವಚ್ಛತಾ ಕರ್ಮಿಗಳಿಗೆ ಮೀಸಲಿರಿಸಲಾಗಿದೆ.
ಜನವರಿ 29 ರಂದು ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭವು ಮೊದಲ ಬಾರಿಗೆ 3-ಡಿ ಅನಾಮಾರ್ಫಿಕ್ ಪ್ರೊಜೆಕ್ಷನ್ಗಳನ್ನು ಹೊಂದಿರಲಿದೆ.