ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವ ಧನ ವಿತರಣಾ ಕಾರ್ಯಕ್ರಮ ನಾಗೂರು ಶ್ರೀ ಕೃಷ್ಣಲಲಿತ ಕಲಾಮಂದಿರದಲ್ಲಿ ಸೋಮವಾರ ಜರಗಿತು.
ಮಾಜಿ ಶಾಸಕರಾದ ಗೋಪಾಲ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಉತ್ತಮ ಸೇವೆ ನೀಡುತ್ತಿವೆ. ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ವಲಯಕ್ಕೂ ನೆರವು ನೀಡುವ ಮೂಲಕ ಖಂಬದಕೋಣೆ ರೈತರ ಸೇವಾ ಸಹಕಾರಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಒಳ್ಳೆಯ ಸಂಸ್ಥೆಯಾಗಿ ಬೆಳೆದಿದೆ. 9 ಕೋಟಿ ವೆಚ್ಚದಲ್ಲಿ ಸಹಕಾರಿ ಮಾಲ್ ನಿರ್ಮಾಣದಂತಹ ದೂರದೃಷ್ಟಿಯ ಕಾರ್ಯಕ್ರಮ ಹಾಕಿಕೊಂಡಿದ್ದು, ಪ್ರಕಾಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಸಂಸ್ಥೆಯನ್ನು ಲಾಭದಾಯಕವನ್ನಾಗಿ ನಡೆಸುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರದ ಏಳು-ಬೀಳುಗಳ ಬಗ್ಗೆ ಚರ್ಚೆ ಹಾಗೂ ವಿಶ್ಲೇಷಣೆ ಮಾಡುವ ಸಂದರ್ಭವೇ ಸಹಕಾರ ಸಪ್ತಾಹ. ಇವತ್ತು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಳ್ಳೆಯ ದಿನಗಳು ಬರುತ್ತಿವೆ. ವಿವಿಧೋದ್ದೇಶ ಸಹಕಾರಿ ಸಂಘಗಳನ್ನಾಗಿ ಪರಿವರ್ತನೆ ಮಾಡುವ ಅವಕಾಶಗಳನ್ನು ಸರ್ಕಾರ ನೀಡಿದೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಲಾಭಾಂಶದಲ್ಲಿ ಇವತ್ತು ಶಿಕ್ಷಣ ಹಾಗೂ ಸಮುದಾಯಕ್ಕೆ ರೂ.9.86 ಲಕ್ಷ ನೀಡುತ್ತಿದೆ. ಬಹು ನಿರೀಕ್ಷೆಯ ರೈತ ಮಾಲ್ ನಿರ್ಮಾಣದ ಬಗ್ಗೆ ಇ-ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆಯ ಬಗ್ಗೆ ಮಾತನಾಡಿ 119 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಚಳವಳಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಬಿರುಸಾಗಿ ಬೆಳೆಯಲು ಮೊಳಹಳ್ಳಿ ಶಿವರಾಯರು ಕಾರಣ. ನಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸುವುದು ಸಹಕಾರದ ತತ್ವ. ಸಹಕಾರದ ಅರಿವು, ಪ್ರಜ್ಞಾವಂತಿಕೆಯಿಂದ ಆರ್ಥಿಕ ವಿಕಾಸವಾಗಿದೆ. ಸಹಕಾರ ಕ್ಷೇತ್ರಗಳ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆಯೂ ಇದೆ ಎಂದರು.
ಸಂಘದ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವ ಶಿಕ್ಷಕರಿಗೆ ಗೌರವಧನ ವಿತರಣೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಭೂ ಅಭಿವೃದ್ದಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ, ಎಂ.ಮಹೇಶ ಹೆಗ್ಡೆ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ, ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ನಿರ್ದೇಶಕ ಬಿ.ರಘುರಾಮ ಶೆಟ್ಟಿ, ಕೆ.ಮೋಹನ ಪೂಜಾರಿ, ಬಿ.ಎಸ್ ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ ದೇವಾಡಿಗ, ಹೂವ ನಾಯ್ಕ, ದಿನೀತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಡಾ.ಗಣೇಶ ಗಂಗೊಳ್ಳಿ ನಾಡಗೀತೆ ಹಾಡಿದರು. ಹಿರಿಯ ವ್ಯವಸ್ಥಾಪಕ ಚಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ ನಿರೂಪಿಸಿದರು.