704 ಪ್ರವಾಸಿಗರ ಆಗಮನ : ನವ ಮಂಗಳೂರು ಬಂದರಿಗೆ ಎರಡನೇ ವಿದೇಶಿ ಪ್ರವಾಸಿ ಹಡಗು

ಮಂಗಳೂರು: ಈ ಋತುವಿನ ಎರಡನೇ ಪ್ರವಾಸಿ ಹಡಗು ಗುರುವಾರ ನವ ಮಂಗಳೂರು ಬಂದರಿಗೆ ಆಗಮಿಸಿ ತೆರಳಿದೆ. ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು “MS BOLETTE” ನಿನ್ನೆ ಬೆಳಗ್ಗೆ 8 ಗಂಟೆಗೆ ನವ ಮಂಗಳೂರು ಬಂದರಿಗೆ ಆಗಮಿಸಿತ್ತು.

ಇದು ನವ ಮಂಗಳೂರು ಬಂದರಿನಲ್ಲಿರುವ ಬರ್ತ್ ನಂ.04 ರಲ್ಲಿ ಲಂಗರು ಹಾಕಿತ್ತು. ಹಡಗಿನ ಒಟ್ಟಾರೆ ಉದ್ದವು 238 ಮೀಟರ್ ಮತ್ತು 62,735 ಒಟ್ಟು ಟನ್ನೇಜ್ ಮತ್ತು 8.1 ಮೀಟರ್ ಕರಡು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹಡಗಿನಿಂದ ಇಳಿಯುವಾಗ ಪ್ರಯಾಣಿಕರಿಗೆ “ಚೆಂಡೆ” ಮತ್ತು “ಹುಲಿವೇಷ ಕುಣಿತ” ಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.ಈ ತಿಂಗಳ 2ನೇ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿ ಸಂಜೆ 5 ಗಂಟೆಗೆ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ತೆರಳಿದೆ.ಹಡಗಿನಲ್ಲಿ 704 ಪ್ರಯಾಣಿಕರು ಮತ್ತು 645 ಸಿಬ್ಬಂದಿ ಆಗಮಿಸಿದ್ದರು.

ಈ ತಿಂಗಳ ಮೊದಲ ವಿದೇಶಿ ಪ್ರವಾಸಿ ಹಡಗು ‘ಸೆವೆನ್ ಸೀಸ್ ನ್ಯಾವಿಗೇಟರ್’ ಡಿಸೆಂಬರ್​ 8 ರಂದು ನವ ಮಂಗಳೂರು ಬಂದರಿನ ಬರ್ತ್ ನಂ.04 ರಲ್ಲಿ ಲಂಗರು ಹಾಕಿತ್ತು. ಬಹಮಾಸ್ ಧ್ವಜದ ಈ ಹಡಗು ಸುಮಾರು 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಯೊಂದಿಗೆ ಬಂದಿತ್ತು.
ಪ್ರಯಾಣಿಕರ ಮನರಂಜಿಸಲು ನವ ಮಂಗಳೂರು ಬಂದರಿನಲ್ಲಿ ಸುಂದರ ಭರತನಾಟ್ಯ ಪ್ರದರ್ಶನ ಏರ್ಪಡಿಸಿದ್ದು, ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಪ್ರವಾಸಿಗರು ಕಾರ್ಕಳ ಗೋಮ್ಮಟೇಶ್ವರ ದೇವಸ್ಥಾನ, ಮೂಡಬಿದ್ರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯೂ ಫ್ಯಾಕ್ಟರಿ, ಕದ್ರಿ ಗೋಕರ್ಣನಾಥ ದೇವಸ್ಥಾನ, ಸೇಂಟ್​ ಅಲೋಶಿಯಸ್ ಚಾಪೆಲ್, ನಗರದ ಸ್ಥಳೀಯ ಮಾರುಕಟ್ಟೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಗುರುವಾರ ಸಂಜೆ 5 ಗಂಟೆಗೆ ಪ್ರಯಾಣ ಬೆಳೆಸಿತು.