ಕೋವಿಡ್ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು: ಕೇಂದ್ರ ಸರ್ಕಾರದಿಂದ ಕಠಿಣ ಕ್ರಮ

ನವದೆಹಲಿ:  ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಹಲ್ಲೆ ನಡೆಸುವವರಿಗೆ  7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವುಳ್ಳ ಸುಗ್ರೀವಾಜ್ಞೆ ರೂಪಿಸಿದೆ.
ಇಂತಹ ಪ್ರಕರಣಗಳನ್ನು ಸಂಜ್ಞೇಯ ಅಪರಾಧ (ಕಾಗ್ನೈಜಿಬಲ್) ಎಂದು ಪರಿಗಣಿಸಲು ಮತ್ತು ಜಾಮೀನು ನೀಡದೇ ಇರಲು ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ.
‘ನಾವು ಸುಗ್ರೀವಾಜ್ಞೆ ರೂಪಿಸಿದ್ದೇವೆ. ಇದರ ಅನ್ವಯ ತಪ್ಪಿತಸ್ಥರಿಗೆ ₹ 1 ಲಕ್ಷದಿಂದ ₹ 5 ಲಕ್ಷದ ವರೆಗೆ ದಂಡ ವಿಧಿಸಲೂ ಅವಕಾಶವಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ಕೂಡಲೇ ಸುಗ್ರೀವಾಜ್ಞೆ ಜಾರಿಗೆ ಬರಲಿದೆ’ ಎಂದು ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.