ಹಾವೇರಿ: ಇಲ್ಲಿನ ಲಾಡ್ಜ್ ಒಂದರ ಕೋಣೆಗೆ ನುಗ್ಗಿ ಅಂತರ್ ಮತೀಯ ಜೋಡಿಗಳನ್ನು ಥಳಿಸಿದ ಏಳು ಮಂದಿಯ ವಿರುದ್ಧ ಅತ್ಯಾಚಾರದ ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನ್ನ ಸ್ನೇಹಿತನೊಂದಿಗೆ ಹೊಟೇಲ್ ಕೋಣೆಯಲ್ಲಿದ್ದ ಅನ್ಯ ಕೋಮಿನ ಮಹಿಳೆಯು ತನ್ನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಏಳು ಪುರುಷರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಬಗ್ಗೆ ಗುರುವಾರ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದು, ಕಾಡಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ ನಂತರ, ಹಲ್ಲೆಕೋರರು ತನ್ನನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ನಗರದಾದ್ಯಂತ ತಿರುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಡ್ರೈವರ್ ಕೂಡ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ಅವರು ನಂತರ ನನ್ನನ್ನು ಬಸ್ ನಿಲ್ದಾಣದಲ್ಲಿ ಇಳಿಸಿದರು. ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಆಕೆ ಹೇಳಿರುವುದಾಗಿ ವರದಿಯಾಗಿದೆ.
“ಅತ್ಯಾಚಾರದ ಬಗ್ಗೆ ನಮಗೆ ಮೊದಲೇ ಹೇಳಿರಲಿಲ್ಲ. ಮಹಿಳೆಯ ವೀಡಿಯೋ ಕುರಿತು ಮಾಧ್ಯಮಗಳ ವರದಿ ಮೂಲಕವೇ ನಮಗೆ ಈ ವಿಷಯ ತಿಳಿಯಿತು. ನಾವು ಸೂಕ್ತ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ, ”ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಹೇಳಿದ್ದಾರೆ.
ವಿವಾಹಿತ ಅನ್ಯಕೋಮಿನ ಮಹಿಳೆ ತಾನು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ಹಲ್ಲೆಕೋರರು ಅನ್ಯಕೋಮಿಗೆ ಸೇರಿದವರಾಗಿದ್ದು, ಹಲ್ಲೆಯ ವಿಡಿಯೋಗಳನ್ನೂ ರೆಕಾರ್ಡ್ ಮಾಡಿಕೊಂಡಿದ್ದಾರೆ. ಜೋಡಿ ಅಪರಾಧವನ್ನು ವರದಿ ಮಾಡಬಾರದು ಎಂದು ಖಚಿತಪಡಿಸಿಕೊಳ್ಳಲು ಪುರುಷರು ಬಯಸಿದ್ದರು ಎಂದು ಮೂಲಗಳು ಹೇಳಿವೆ. ಜೋಡಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಹೋಟೇಲ್ ಕೋಣೆಗೆ ನುಗ್ಗಿದ ಪುರುಷರು ಮಹಿಳೆಯನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆಕೆಯ ಸ್ನೇಹಿತನಿಗೂ ಥಳಿಸಿದ್ದಾರೆ ಎಂದು ವರದಿಯಾಗಿದೆ.