ತೈವಾನ್ ನಲ್ಲಿ 7.5 ತೀವ್ರತೆಯ ಭೂಕಂಪ: ಕರಾವಳಿ ತೀರಗಳಿಗೆ ಸುನಾಮಿ ಎಚ್ಚರಿಕೆ ನೀಡಿದ ಜಪಾನ್, ಫಿಲಿಪ್ಪೀನ್ಸ್

ಟೋಕಿಯೋ: ತೈವಾನ್ ಬಳಿ ಸಮುದ್ರದಲ್ಲಿ 7.5 ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು (Earthquake) ಸುನಾಮಿ (Tsunami) ಎಚ್ಚರಿಕೆಯನ್ನು ಪ್ರಚೋದಿಸಿದ ನಂತರ ಜಪಾನ್ (Japan) ದಕ್ಷಿಣ ಪ್ರಾಂತ್ಯದ ಓಕಿನಾವಾ ಕರಾವಳಿ ಪ್ರದೇಶದ ಜನರಿಗೆ ಸ್ಥಳಾಂತರಿಸುವ ಸಲಹೆಯನ್ನು ನೀಡಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, 3 ಮೀಟರ್ ವರೆಗಿನ ಸುನಾಮಿ ಅಲೆಗಳು ಜಪಾನ್‌ನ ನೈಋತ್ಯ ಕರಾವಳಿಯ ಹೆಚ್ಚಿನ ಪ್ರದೇಶಗಳನ್ನು ತಲುಪುವ ನಿರೀಕ್ಷೆಯಿದೆ.

ಬುಧವಾರ ಬೆಳಿಗ್ಗಿನ ಜಾವ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಜಪಾನ್ ಬಳಿಕ ಫಿಲಿಪ್ಪೀನ್ಸ್ ಕೂಡಾ ಕರಾವಳಿ ತೀರಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.

ಭೂಕಂಪದ ಕೇಂದ್ರಬಿಂದುವಾಗಿರುವ ಹುವಾಲಿಯನ್‌ನ ಪರ್ವತಮಯ, ವಿರಳ ಜನಸಂಖ್ಯೆಯ ಪೂರ್ವ ಪ್ರದೇಶದಲ್ಲಿ ಬಂಡೆಗಳು ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಹಾಗೂ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತೈವಾನ್‌ನ ಅಗ್ನಿಶಾಮಕ ಇಲಾಖೆಯು ತಿಳಿಸಿದೆ.

ಕನಿಷ್ಠ 26 ಕಟ್ಟಡಗಳು ಕುಸಿದಿವೆ ಹಾಗೂ ಸುಮಾರು 20 ಜನರು ಕುಸಿದ ಕಟ್ಟಡಗಳಡಿ ಸಿಲುಕಿಕೊಂಡಿದ್ದಾರೆ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಇಲಾಖೆ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಭೂಕಂಪದ ತೀವ್ರತೆ 7.4 ಎಂದು ಹೇಳಿದೆ. ಅದರ ಕೇಂದ್ರಬಿಂದುವು ತೈವಾನ್‌ನ ಹುವಾಲಿಯನ್ ಸಿಟಿಯಿಂದ 18 ಕಿಲೋಮೀಟರ್ ದಕ್ಷಿಣಕ್ಕೆ 34.8 ಕಿಮೀ ಆಳದಲ್ಲಿದೆ, ಜಪಾನ್‌ನ ಹವಾಮಾನ ಸಂಸ್ಥೆಯು 7.7 ರ ತೀವ್ರತೆಯನ್ನು ನೀಡಿದೆ.

ತೈವಾನ್‌ನ ಪೂರ್ವದಲ್ಲಿ ಸಂಭವಿಸಿದ ಭೂಕಂಪವು “25 ವರ್ಷಗಳಲ್ಲಿ ಅತ್ಯಂತ ಪ್ರಬಲವಾಗಿದೆ” ಎಂದು ತೈಪೆಯ ಭೂಕಂಪನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.