ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 6ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಏತದ್ಧಿ ರಾಮಾಯಣಂ ಯಕ್ಷಗಾನ ಪ್ರದರ್ಶನ

ಉಡುಪಿ: ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ ಹಾಗೂ ಸೋದೆ ವಾದಿರಾಜ ಮಠ, ಉಡುಪಿ ಇವರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ತೆಂಕುತಿಟ್ಟು ಯಕ್ಷಗಾನ ಅಧ್ಯಯನ ಕೇಂದ್ರ ಇದರ 6ನೇ ವರ್ಷದ ವಾರ್ಷಿಕೋತ್ಸವವು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನ. 18 ರಂದು ಮಧ್ಯಾಹ್ನ 3 ಗಂಟೆಯಿಂದ ಜರಗಲಿದೆ.

ಈ ಪ್ರಯುಕ್ತ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ವಿದ್ವಾನ್ ಕೆ ಚಂದ್ರಶೇಖರ ನಾವಡ, ಯಕ್ಷಗಾನ ಪ್ರೋತ್ಸಾಹಕ ಶಶಿಕಾಂತ್ ಭಟ್ ಭಾಗವಹಿಸಲಿದ್ದಾರೆ.

ಯಕ್ಷ ಗುರು ರಾಕೇಶ್ ರೈ ಅಡ್ಕ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ಸಂಯೋಜಕಿ ಗೋಪಿಕಾ ಮಯ್ಯ ಉಪಸ್ಥಿತರಿರಲಿದ್ದಾರೆ.

ಯಕ್ಷಗುರು ರಾಕೇಶ್ ರೈ ಅಡ್ಕ ಇವರ ಶಿಷ್ಯಂದಿರಿಂದ ಮಧ್ಯಾಹ್ನ 3 ಗಂಟೆಯಿಂದ ‘ಏತದ್ಧಿ ರಾಮಾಯಣಂ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿರುವುದು. ಕಾರ್ಯಕ್ರಮವು ಮಲ್ಯಾಡಿ ಲೈವ್ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನವು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಯಕ್ಷಗಾನ ತರಬೇತಿಯನ್ನು ಸಮರ್ಥ ಗುರು ರಾಕೇಶ್ ರೈ ಅಡ್ಕ ಇವರ ಮೂಲಕ ಉಚಿತವಾಗಿ ನೀಡುತ್ತಿದೆ. ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯವನ್ನು ಪೋಷಿಸುತ್ತಾ ಬಹುವಾಗಿ ಅನುಗ್ರಹಿಸುತ್ತಿದ್ದಾರೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.