ಕಾಸರಗೋಡು: ಎಲ್ಲೆಲ್ಲೂ ಕಾಂತಾರ ಮಾಯೆ ಆವರಿಸಿದೆ. ಹಳ್ಳಿ, ನಗರ, ದೇಶ, ಭಾಷೆಗಳ ಗಡಿಯನ್ನು ಮೀರಿ ಕಾಂತಾರ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ, ಮತ್ತು ಈಗಲೂ ತುಳುವ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಕುಂಟಮುಕ್ಕಲ ಗ್ರಾಮದ ಒಟ್ಟು 69 ಜನರು ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ. ಕಾಸರಗೋಡಿನ ಸಮೀಪದ ಚಿತ್ರಮಂದಿರದಲ್ಲಿ ಕಾಂತಾರವನ್ನು ವೀಕ್ಷಿಸಲು ಈ ಉತ್ಸಾಹಭರಿತ ಗ್ರಾಮಸ್ಥರ ಗುಂಪು ಒಂದೇ ಬಸ್ ಹತ್ತಿದೆ ಎಂದು ವರದಿಯಾಗಿದೆ.
ಕಾಂತಾರ ಗುಂಗು ಎಲ್ಲರನ್ನೂ ಆವರಿಸಿದೆ. ಕೆಲವರಂತೂ ಈ ಚಿತ್ರವನ್ನು ಮೂರು ನಾಲ್ಕು ಬಾರಿ ನೋಡಿದ್ದಾರೆ ಎಂದು ವರದಿಗಳಾಗಿವೆ. ಚಿತ್ರಮಂದಿರಕ್ಕೆ ಕಾಲಿಡದೆ ಇದ್ದವರೂ ಇಂದು ಕಾಂತಾರ ವೀಕ್ಷಿಸಲು ತೆರಳುತ್ತಿದ್ದಾರೆ. ಭೇಟಿಯಾಗುತ್ತಿರುವವರೆಲ್ಲಾ “ಕಾಂತಾರಾ ಕಂಡ್ರ್ಯಾ” ಎನ್ನುವ ಪ್ರಶ್ನೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಾಂತಾರ ಕಾಣಿ(ನೋಡಿ) ಎಂದು ಜನರನ್ನು ಹುರಿದುಂಬಿಸಲಾಗುತ್ತಿದೆ. ಇದು ಚಲನಚಿತ್ರ ಮಾಯೆಯೋ ಅಥವಾ ದೈವ ಮಾಯೆಯೋ ಎನ್ನುವ ಚಿಂತನೆಗೆ ಒರೆ ಹಚ್ಚಿದೆ ಕಾಂತಾರ.