ಬೆಂಗಳೂರು: ಏಪ್ರಿಲ್ 26 ರಂದು 2024 ರ ಲೋಕಸಭಾ ಚುನಾವಣೆಯ (Loksabha Elections) ಎರಡನೇ ಹಂತದಲ್ಲಿ ನಡೆದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನವು ಮುಕ್ತಾಯಗೊಂಡಿದೆ, ರಾಜ್ಯದಲ್ಲಿ 69 ಪ್ರತಿಶತದಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ತಾತ್ಕಾಲಿಕ ವರದಿ ತಿಳಿಸಿದೆ.
ಸುಡು ಬಿಸಿಲನ್ನೂ ಲೆಕ್ಕಿಸದೆ ಮತದಾರರು ಅತ್ಯುತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ತಮ್ಮ ಜವಾಬ್ದಾರಿ ಪೂರೈಸಿದ್ದಾರೆ. ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತಿ ಹೆಚ್ಚು ಶೇ.81.48ರಷ್ಟು ಮತದಾನವಾಗಿದ್ದು, ಕೋಲಾರದಲ್ಲಿ ಶೇ.78.07 ಹಾಗೂ ಬೆಂಗಳೂರು ಸೆಂಟ್ರಲ್‌ನಲ್ಲಿ ಕನಿಷ್ಠ ಶೇ.52.81ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರದಲ್ಲಿ ಶೇ.54.42 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.53.15ರಷ್ಟು ಮತದಾನವಾಗಿದ್ದು, ನಗರ ಪ್ರದೇಶದಲ್ಲಿ ಮತದಾರರ ನಿರಾಸಕ್ತಿ ಮುಂದುವರಿದಿರುವುದನ್ನು ಸೂಚಿಸುತ್ತದೆ.
ಶುಕ್ರವಾರ ಸಂಜೆ 6 ಗಂಟೆಯವರೆಗೆ ದ.ಕ ಮತ್ತು ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕ್ರಮವಾಗಿ 77.4% ಮತ್ತು 76.1% ಮತದಾನ ನಡೆದಿದೆ.