ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾನ ಮಹಾನ್ ಚೇತನ ಶಂಕರ್ ನಾಗ್ ರವರ 68 ನೇ ಜನ್ಮ ದಿನ

ಇವತ್ತು ಕನ್ನಡ ಚಿತ್ರರಂಗದ ಯಶಸ್ಸನ್ನು ಕಂಡಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ವಿಚಾರ ಶಂಕರ್ ನಾಗ್ ಇದ್ದಿದ್ದರೆ ಈ ಯಶಸ್ಸು ಯಾವತ್ತೋ ಬಂದಿರುತ್ತಿತ್ತು. ಶಂಕರ್ ನಾಗ್ ಬರಿಯ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅದಮ್ಯ ಚೈತನ್ಯ, ಎಂದಿಗೂ ಬತ್ತದ ಉತ್ಸಾಹ, ಕಾಲಕ್ಕಿಂತ ಒಂದು ಹೆಜ್ಜೆ ಮುಂದಿರಬೇಕೆನ್ನುವ ತುಡಿತ. ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾಗಿ 32 ವರ್ಷಗಳು ಸಂದರೂ ಶಂಕರ್ ನಾಗ್ ನೆನಪು ಎಳ್ಳಷ್ಟೂ ಮಾಸಿಲ್ಲ. ಅವರಿಂದು ನಮ್ಮ ಜೊತೆಗಿರುತ್ತಿದ್ದರೆ ಅವರಿಗೆ 68 ವರ್ಷ ತುಂಬುತ್ತಿತ್ತು. ಇಷ್ಟು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗವೇ ಉತ್ತುಂಗಕ್ಕೇರಿ ಬಿಡುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ಶಂಕರ್ ನಾಗ್ ಕೇವಲ ಒಬ್ಬ ನಟ ನಿರ್ದೇಶಕರಾಗಿ ಸಿನಿಮಾ ರಂಗದಲ್ಲೇ ಉಳಿದು ಬಿಡುತ್ತಿರಲಿಲ್ಲ. ಬೆಂಗಳೂರು ಮತ್ತು ಆ ಮೂಲಕ ಸಮಸ್ತ ಕರ್ನಾಟಕದ ಬಗ್ಗೆ ಅಭಿವೃದ್ದಿಯ ಕಸನು ಕಂಡವರವರು. 80 ರ ದಶಕದಲ್ಲೆ ಬೆಂಗಳೂರಿಗೆ ಭೂಗತ ಮೆಟ್ರೋವನ್ನು ಪ್ರಸ್ತಾಪಿಸಿದವರು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೊದಲ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯನ್ನು ಸ್ಥಾಪಿಸಿದವರು, ಸಂಗೀತಕ್ಕಾಗಿ ಸಂಕೇತ್ ಸ್ಟೂಡಿಯೋ ತೆರೆದವರು, ಆಲೋಚನೆಗಳನ್ನು ಹತ್ತಿರ ತರಲು ಕಂಟ್ರಿ ಕ್ಲಬ್ ಅನ್ನು ಸ್ಥಾಪಿಸುವ ಕನಸು ಕಂಡವರು, ಕೇವಲ 8 ದಿನಗಳಲ್ಲಿ ಬಡವರಿಗಾಗಿ ಮನೆಯ ಕಟ್ಟಿಕೊಡುವ ಹುಮ್ಮಸ್ಸಿನಲ್ಲಿದ್ದವರು, ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡುವ ಆಲೋಚನೆಯಲ್ಲಿದ್ದವರು ಇಂದು ಬದುಕಿದ್ದಿದ್ದರೆ ಕರ್ನಾಟಕದ ಚಿತ್ರಣವೆ ಬದಲಾಗಿ ಬಿಡುತ್ತಿತ್ತು. ಆ ಪುಟ್ಟ ತಲೆಯಲ್ಲಿ ದೂರದೃಷ್ಟಿಯಿಂದ ಮಿಳಿತವಾದ ಕೊನೆ ಮೊದಲಿಲ್ಲದ ಕನಸುಗಳು ನಮ್ಮೆಲ್ಲರನ್ನು ಎಲ್ಲಿಗೆ ಕೊಂಡೊಯ್ಯುತ್ತಿತ್ತೋ ಬಲ್ಲವರಾರು?

Shankar Nag: An intense, amazing life and career | Deccan Herald

ಸೃಜನಶೀಲತೆ ಮತ್ತು ಆವಿಷ್ಕಾರಕ್ಕೆ ಇನ್ನೊಂದು ಹೆಸರಾದ ಶಂಕರ್ ನಾಗ್ ರವರು ಸರಳತೆಯ ಸಾಕಾರ ಮೂರ್ತಿ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ತಮ್ಮ ಕೆಲಸವನ್ನು ತಾವೇ ಮಾಡುತ್ತಿದ್ದವರು. ಭಾನುವಾರ ಹೊರತು ಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಹಗಲಿರುಳಿನ ಭೇದವರಿಯದೆ ದುಡಿಯುತ್ತಿದ್ದವರು. ಹತ್ತೇ ನಿಮಿಷದಲ್ಲಿ ಊಟ ಮುಗಿಸಿ ಕೆಲಸಕ್ಕೆ ಅಣಿಯಾಗುತ್ತಿದ್ದವರು, ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ 800 ಪುಟಗಳ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸುವವರು! ಬಿಡುವಿನ ವೇಳೆಯಲ್ಲಿ 20 ರಿಂದ 30 ವರ್ಷಗಳವರೆಗೆ ಮಾಡಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟತೆ ಇದ್ದವರು ಇಂದು ನಮ್ಮ ಜೊತೆಗಿಲ್ಲ ಎನ್ನುವುದೇ ಒಂದು ಕೊರಗು. ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುವ, ಭಾರತೀಯ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ ಶಂಕರ್ ನಾಗ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಮಾಹಿತಿ: ಮೆಟ್ರೋಸಾಗ,ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್