ಉತ್ತಮ ಮತ್ತು ತ್ವರಿತ ಆರೋಗ್ಯ ಸೇವೆಗಾಗಿ ಜಿಲ್ಲೆಗೆ ಶೀಘ್ರದಲ್ಲೇ ಬರಲಿದೆ 6 ‘ನಮ್ಮ ಕ್ಲಿನಿಕ್’

ನಗರ ಪ್ರದೇಶದ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ನಗರ ಮತ್ತು ಪಟ್ಟಣ ಪ್ರದೇಶದ ವಾರ್ಡ್ ನಲ್ಲಿ ಉತ್ತಮವಾಗಿ ಮತ್ತು ತ್ವರಿತವಾಗಿ ಆರೋಗ್ಯ ಸೇವೆಗಳನ್ನು ದೊರಕಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯಾದ್ಯಂತ ನಮ್ಮ ಕ್ಲಿನಿಕ್ ಗಳನ್ನು ತೆರೆಯಲು ಉದ್ದೇಶಿಸಿದ್ದು ಉಡುಪಿ ಜಿಲ್ಲೆಯಲ್ಲಿ ಒಟ್ಟು 6 ನಮ್ಮ ಕ್ಲಿನಿಕ್ ಗಳ ಆರಂಭಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.

ನಗರ ಪ್ರದೇಶದ ಸಾರ್ವಜನಿಕರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದು, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಹಾಗೂ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ನಮ್ಮ ಕ್ಲಿನಿಕ್ ಹೊಂದಿದ್ದು, ನಗರ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರಿಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಸಹ ಇದೆ.

ನಮ್ಮ ಕ್ಲಿನಿಕ್ ನ ವಿಶೇಷತೆ: ನಮ್ಮ ಕ್ಲಿನಿಕ್ ನಲ್ಲಿ ಒಬ್ಬ ಡಾಕ್ಟರ್, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್ ಮತ್ತು ಒಬ್ಬ ಡಿ ಗ್ರೂಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ನಾಗರೀಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಔಷಧಿ ವಿತರಣೆ ಮಾಡಲಾಗುವುದು. 12 ರೀತಿಯ ವಿವಿಧ ಆರೋಗ್ಯ ಸೇವೆಗಳು ಹಾಗೂ ರಕ್ತ, ಮೂತ್ರ ಪರೀಕ್ಷೆ ಸೇರಿದಂತೆ ಲ್ಯಾಬ್ ನಲ್ಲಿ 14 ರೀತಿಯ ವಿವಿಧ ಪ್ರಯೋಗಾಲಯ ಸೇವೆ ದೊರೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4.30 ರ ವರೆಗೆ ಈ ಕ್ಲಿನಿಕ್ ಗಳು ಕಾರ್ಯ ನಿರ್ವಹಿಸಲಿದೆ. ಇ-ಸಂಜೀವಿನಿ ಮತ್ತು ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 3, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 1 ಮತ್ತು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 2 ನಮ್ಮ ಕ್ಲಿನಿಕ್ ಗಳನ್ನು ತೆರೆಯಲು ಅನುಮತಿ ದೊರೆತಿದ್ದು, ಈ ಕುರಿತಂತೆ ಈಗಾಗಲೇ ಅಗತ್ಯ ಸಿದ್ದತೆಗಳು ನಡೆದಿದ್ದು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ನಮ್ಮ ಕ್ಲಿನಿಕ್ ಆರಂಭದಿಂದ ನಗರ ಪ್ರದೇಶದ ಜನತೆ, ತ್ವರಿತವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆದು ಉತ್ತಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಉಡುಪಿ ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ಸಿಬ್ಬಂದಿಗಳ ನೇಮಕಕ್ಕೆ ಈಗಾಗಲೇ ಸಂದರ್ಶನ ನಡೆಸಲಾಗಿದೆ. ಜಿಲ್ಲೆಯಲ್ಲಿ ಶೀಘ್ರದಲ್ಲೇ ನಮ್ಮ ಕ್ಲಿನಿಕ್ ಗಳನ್ನು ಆರಂಭಗೊಂಡು ವೈದ್ಯರು ಮತ್ತು ಸಿಬ್ಬಂದಿಗಳು ನಗರ ಪ್ರದೇಶದ ಸಾರ್ವಜನಿಕರ ಆರೋಗ್ಯ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.