ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ
ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಉಚಿತ ತೆಂಕುತಿಟ್ಟು ಯಕ್ಷಗಾನ ತರಗತಿಯು ಶ್ರೀ ಸೋದೆ ಮಠದ ಯತಿಗಳ ಕೃಪಾಶೀರ್ವಾದದಿಂದ ಯಶಸ್ವಿಯಾಗಿ ಐದು ಸಂವತ್ಸರಗಳನ್ನು ಪೂರೈಸಿದೆ. ಇದರ 5ನೇ ವರ್ಷದ ವಾರ್ಷಿಕೋತ್ಸವವು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ 30 ಏಪ್ರಿಲ್ 2022, ಶನಿವಾರದಂದು ಸಂಜೆ 7 ಗಂಟೆಗೆ ಜರುಗಲಿದೆ.
ಈ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶ್ರೀ ಎಂ ಎಲ್ ಸಾಮಗ, ಶ್ರೀ ಶ್ರೀನಿವಾಸ ಕಳವಾರು ಪೆರ್ಮುದೆ ಅವರು ಪಾಲ್ಗೊಳ್ಳಲಿದ್ದಾರೆ. ಪ್ರತಿಷ್ಠಾನದ ಪ್ರವರ್ತಕರಾದ ಶ್ರೀಮತಿ ಗೋಪಿಕಾ ಮಯ್ಯ ಮತ್ತು ಶ್ರೀ ಸತೀಶ್ ಮಯ್ಯ ಹಾಗೂ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಉಪಸ್ಥಿತರಿರುವರು.
ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಶಿಷ್ಯಂದಿರಿಂದ ಸಂಜೆ 7 ಗಂಟೆಯಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶನ ಇರುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಪ್ರತಿಷ್ಠಾನದ ಪ್ರವರ್ತಕರು , ವಿದ್ಯಾರ್ಥಿಗಳು ಮತ್ತು ಪೋಷಕರು ಬಯಸಿದ್ದಾರೆ.
ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನವು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಯಕ್ಷಗಾನ ತರಬೇತಿಯನ್ನು ಸಮರ್ಥ ಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ ಉಚಿತವಾಗಿ ನೀಡುತ್ತಿದೆ. ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯವನ್ನು ಪೋಷಿಸುತ್ತಾ ಬಹುವಾಗಿ ಅನುಗ್ರಹಿಸುತ್ತಿದ್ದಾರೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ.
ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ