ಉಡುಪಿ: ಕಳೆದ 11 ವರ್ಷದಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 200 ಗ್ರಾಮದಲ್ಲಿರುವ 57 ಸಾವಿರಕ್ಕೂ ಅಧಿಕ ಜೀವನ ಮಧುರ ಪಾಲಿಸಿದಾರರು, ಎಲ್ ಐಸಿಗೆ ಕಟ್ಟಿರುವ ಎಲ್ಲ ಹಣವನ್ನು ಕಳೆದುಕೊಂಡು ಇಂದಿಗೂ ನ್ಯಾಯದಿಂದ ವಂಚಿತರಾಗಿದ್ದಾರೆ ಎಂದು ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಹೇಳಿದರು.
ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ಈ ಪ್ರಕರಣವು ಕರ್ನಾಟಕ ರಾಜ್ಯ ಬಳಕೆದಾರರ ಆಯೋಗದಲ್ಲಿ ತನಿಖೆಗೆ ಬಾಕಿ ಉಳಿದಿದೆ. ಮೊದಲು ಮೂರು ವರ್ಷ ಕೋವಿಡ್ ಕಾರಣದಿಂದ ಬಾಕಿ ಉಳಿದಿತ್ತು. ಆ ಬಳಿಕ ಹಿಂದೆ ಬಾಕಿ ಉಳಿದಿದ್ದ ಪ್ರಕರಣಗಳ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದ್ರು. ಆದರೆ, ಈಗ ಬಳಕೆದಾರರ ನ್ಯಾಯಾಲಯದ ಪೀಠಕ್ಕೆ ಅಧ್ಯಕ್ಷರೇ ಇಲ್ಲದೆ ಎಲ್ಲ ಪ್ರಕರಣಗಳು ಬಾಕಿ ಉಳಿದಿವೆ. ಇದನ್ನು ಸರಕಾರದ ಗಮನಕ್ಕೂ ತಂದಿದ್ದೇವೆ. ಸಂಬಂಧಪಟ್ಟ ಸಚಿವಾಲಯಕ್ಕೂ ತಿಳಿಸಿದ್ದೇವೆ. ಆದರೂ ಇವರಿಗೆ ನ್ಯಾಯ ಸಿಕ್ಕಿಲ್ಲ. ಲಕ್ಷಾಂತರ ಬಳಕೆದಾರರು ಇವತ್ತು ಅಥವಾ ನಾಳೆ ನ್ಯಾಯ ಸಿಗುತ್ತದೆ ಅಂತಾ ಕಾಯುತ್ತಿದ್ದಾರೆ ಎಂದರು.
ಹೀಗಾಗಿ ಅವರಿಗೆ ಈವರೆಗೂ ನ್ಯಾಯ ಸಿಗದಿರುವಾಗ ಬಳಕೆದಾರರ ದಿನಾಚರಣೆ ಮಾಡುವುದರಲ್ಲಿ ಅರ್ಥವಿಲ್ಲ. ಬಳಕೆದಾರರ ಜಿಲ್ಲಾ ನ್ಯಾಯಾಲಯ ಹಾಗೂ ರಾಜ್ಯ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಆ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಬೇಕು ಎಂದು ಅವರು ಆಗ್ರಹಿಸಿದರು.












