ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೆ.25ರಿಂದ 27ರವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 56 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿತಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು 7 ಮಂದಿ ಮೃತಪಟ್ಟಿದ್ದಾರೆ. ಲಖಿಮ್ಪುರ ಖೇರಿ, ಬಹ್ರೈಚ್ ಮತ್ತು ಬಲರಾಮಪುರದಲ್ಲಿ ತಲಾ 5 ಮಂದಿ, ಅಯೋಧ್ಯೆ ಮತ್ತು ಗೋರಖ್ಪುರದಲ್ಲಿ ತಲಾ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ರಾಜ್ಯದ 63 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಈವರೆಗೆ 1,021 ಮನೆಗಳು ಹಾನಿಗೊಳಗಾಗಿವೆ. ರಾಜ್ಯದಲ್ಲಿ 45.1 ಮಿ.ಮೀ. ಮಳೆ ದಾಖಲಾಗಿದೆ.
20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಮುಂದಿನ 24 ಗಂಟೆಗಳ ಬಳಿಕ ರಾಜ್ಯದ ಹವಾಮಾನದಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದ್ದರೂ, 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಘಾಗ್ರಾ ಮತ್ತು ರಾಪ್ತಿ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ.
ಐತಿಹಾಸಿಕ ಗೇಟ್ನ ಭಾಗ ಕುಸಿತ
ಭಾರೀ ಮಳೆಯಿಂದ ಲಕ್ನೋದಲ್ಲಿರುವ ಐತಿಹಾಸಿಕ ಗೇಟ್ನ ಒಂದು ಭಾಗ ಕುಸಿದುಬಿದ್ದಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ವಾಹನಗಳು ಹಾಗೂ ಪಾದಚಾರಿಗಳ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಜನಸಂದಣಿ ಕಡಿಮೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದಲ್ಲದೆ, ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಮರಗಳು ಉರುಳಿ ವಾಹನಗಳ ಮೇಲೆ ಬಿದ್ದಿರುವ ಘಟನೆಗಳೂ ವರದಿಯಾಗಿವೆ.
ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ
ನೇಪಾಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಕ್ಷಣಾ ತಂಡಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಮಳೆಯಿಂದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ನಿರ್ದೇಶನ ನೀಡಲಾಗಿದೆ.















