ಅಮಾಸೆಬೈಲು: ಎರಡು ಈಚರ್ ವಾಹನಗಳಲ್ಲಿ 52 ಕೋಣಗಳ ಅಕ್ರಮ ಸಾಗಾಟ; ನಾಲ್ಕು ಆರೋಪಿಗಳ ಬಂಧನ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಇಂದು ಬೆಳಿಗ್ಗೆ 9.30 ಸುಮಾರಿಗೆ 52 ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಈಚರ್ ವಾಹನಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದು, ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮೆಹಬೂಬ್ ಪ್ರಾಯ (27), ಬೈಲಹೊಂಗಲ ತಾಲ್ಲೂಕಿನ ಬೆಳವಾಡಿಯ ಬಾಪು ಸಾಹೇಬ್ ( 46), ದಾವಣಗೆರೆ ಜಿಲ್ಲೆಯ ಚಿಕ್ಕನಹಳ್ಳಿ ಹೊಸ ಬಡಾವಣೆ ಇಮ್ರಾನ್ ( 29 ) ಹಾಗೂ ಬೈಲಹೊಂಗಲ ತಾಲ್ಲೂಕಿನ ಮರಡಿ ಬಸವನ ಗ್ರಾಮದ ನಿವಾಸಿ ಆಸಿಫ್( 23 ) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಎರಡು ಈಚರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಈಚರ್ ವಾಹನದಲ್ಲಿ 24 ಕೋಣಗಳನ್ನು ಹಾಗೂ ಮತ್ತೊಂದು ಈಚರ್ ವಾಹನದಲ್ಲಿ 28 ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.

ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಡೆದು ತಪಾಸಣೆ ನಡೆಸುವ ಪ್ರಕರಣ ಬೆಳಕಿಗೆ ಬಂದಿದೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.