ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿಯ ಆಶ್ರಯದಲ್ಲಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶದಲ್ಲಿ ಉಡುಪಿ ಜಿಲ್ಲೆಯ ಸುಮಾರು 500 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ, ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ರಮೇಶ್ ಡಾಕುಳಗಿ, ಈರೇಶ್ ಹೀರೇಹಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ಸಿದ್ದರಾಜು ದೊಡ್ಡಿಂದವಾಡಿ, ಹೆಚ್. ಹುಸೇನಪ್ಪ, ಸಿದ್ದಪ್ಪ ಕಾಂಬ್ಳೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮುಖಂಡರು, ಬುದ್ಧಿಜೀವಿಗಳು, ಪ್ರಗತಿಪರರು, ಸಾಹಿತಿಗಳು ಹಾಗೂ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದಲಿತ ಸಮುದಾಯಗಳಿಗೆ ಭೂಮಿ ಮತ್ತು ವಸತಿ ಹಂಚಿಕೆ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಉದ್ಯೋಗ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಯಡಿ ಏಕಗವಾಕ್ಷಿ ನೀತಿಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮೊದಲಾದವರು ಇದ್ದರು.

















