ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಪುರುಷರಿಗೆ ಶೇ.50 ಆಸನ ಮೀಸಲು!

ಬೆಂಗಳೂರು: ಜೂ.11ರಿಂದ ಕಾಗ್ರೆಸ್ ಗ್ಯಾರಂಟಿಯ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗಲಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲು ಸರ್ಕಾರ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಲಭ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್‌ ಪ್ರಯಾಣಕ್ಕೆ ಮುಂದಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಟಿಕೆಟ್‌ ಪಡೆದು ಪ್ರಯಾಣ ಮಾಡುವ ಪುರುಷರಿಗೆ ಆಸನ ಕೊರತೆಯಾಗಬಹುದು. ಇದರಿಂದ ಮೊದಲೆ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಮತ್ತಷ್ಟು ಕತ್ತರಿ ಬೀಳಲಿದೆ. ಹೀಗಾಗಿ ಪುರುಷರಿಗೆ ಬಸ್‌ಗಳಲ್ಲಿ ಆಸನಗಳನ್ನು ಮೀಸಲಿಡಲಾಗುತ್ತಿದೆ. ಆದಾಗ್ಯೂ ಬಿಎಂಟಿಸಿಯಲ್ಲಿ ಪುರುಷರಿಗೆ ಸೀಟು ಮೀಸಲಾತಿ ನೀಡಲಾಗಿಲ್ಲ.

ಇದುವರೆಗೆ ಬಸ್ ಗಳಲ್ಲಿ ಮೊದಲ ಮೂರು ಆಸನಗಳು ಮಹಿಳೆಯರಿಗೆ ಮೀಸಲು ಹಾಗೂ ಅಂಗವಿಕಲರಿಗಾಗಿ ಮೀಸಲು ಎನ್ನುವ ಬೋರ್ಡ್ ಗಳು ಕಂಡು ಬರುತ್ತಿದ್ದವು. ಇನ್ನೀಗ ಪುರುಷರಿಗೆ ಮೀಸಲು ಎನ್ನುವ ಬೋರ್ಡ್ ಗಳು ಬಸ್ ಗಳಲ್ಲಿ ಕಂಡು ಬಂದರೂ ಬರಬಹುದು.