ಬೆಂಗಳೂರು : ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದ್ದು, ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶವಿರಲಿದೆ. ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ಇಂದಿನಿಂದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚಾರಿ ದಂಡ ಪಾವತಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶ ನೀಡಲಾಗಿದೆ.
ಆದರೆ, ಕೇವಲ ಫೆಬ್ರವರಿ 11ಕ್ಕೂ ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ರಿಯಾಯತಿ ಅವಕಾಶ ಅನ್ವಯವಾಗಲಿದೆ. ಇಂದಿನಿಂದ ದಂಡ ಪಾವತಿಸಲು ಅವಕಾಶ ಆರಂಭವಾಗಲಿದೆ ಎಂಬುದರ ಕುರಿತು ಸಂಚಾರಿ ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಬೇಕಿದೆ. ಆ ಬಳಿಕ ವಾಹನ ಸವಾರರು ಸಂಚಾರಿ ಪೊಲೀಸ್ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ, ಬೆಂಗಳೂರು ಸಂಚಾರಿ ಪೊಲೀಸ್ ವೆಬ್‌ಸೈಟ್ ಮೂಲಕ ವಾಹನ ಸವಾರರು ದಂಡ ಪಾವತಿಸಬಹುದಾಗಿದೆ
ರಾಜ್ಯದಲ್ಲಿ ಸುಮಾರು 1300 ಕೋಟಿ ರೂಗಳಿಗೂ ಅಧಿಕ ದಂಡ ಪಾವತಿಗೆ ಬಾಕಿ ಇರುವ ಕುರಿತು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಬಳಿಕ ಈ ಸಮಸ್ಯೆಗೆ ಪರಿಹಾರವಾಗಿ ಶೇ 50 ರಿಯಾಯಿತಿ ನೀಡುವ ಕುರಿತು ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು.
ಈ ಹಿಂದೆ ಫೆಬ್ರವರಿ 2 ರಿಂದ 11ರವರೆಗೂ ವಾಹನ ಸವಾರರಿಗೆ ಸಂಚಾರಿ ದಂಡ ಪಾವತಿಸಲು 50% ರಿಯಾಯತಿ ನೀಡಿ ರಾಜ್ಯ ಸರ್ಕಾರ ಘೋಷಿಸಿತ್ತು. ಆ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ 120 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹವಾಗಿತ್ತು. ಬಳಿಕ ಫೆಬ್ರವರಿ 14ರಂದು ನಡೆದಿದ್ದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಸಭೆಯಲ್ಲಿ ಮತ್ತೊಮ್ಮೆ ರಿಯಾಯತಿ ಆಫರ್ ವಿಸ್ತರಣೆಯ ಬಗ್ಗೆ ತಿರ್ಮಾನಿಸಲಾಗಿತ್ತು. ನಂತರ ಮತ್ತೊಮ್ಮೆ ರಿಯಾಯಿತಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಸಂಚಾರಿ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ ಮೂಲಕ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.
ಫೆಬ್ರವರಿ 2 ರಿಂದ ಆರಂಭವಾಗಿದ್ದ ಶೇ 50 ರಿಯಾಯಿತಿಯಿಂದಾಗಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳ ಕೋಟ್ಯಂತರ ರೂಪಾಯಿ ದಂಡ ಸಂಗ್ರಹಣೆಯಾಗಿತ್ತು. ರಿಯಾಯತಿ ಘೋಷಿಸಿದ ಆರಂಭದ ದಿನದಿಂದ ಸುಮಾರು 8 ದಿನಗಳಲ್ಲಿ 31.11 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದ 85.83 ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು. ದಂಡವನ್ನು ಪಾವತಿ ಮಾಡದೇ ಬಾಕಿ ಇಟ್ಟುಕೊಂಡಿದ್ದ ವಾಹನ ಸವಾರರು ಈ 50 ಶೇಕಡಾ ರಿಯಾಯಿತಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದರು.