ಹೈದರಾಬಾದ್: ಶ್ರೀಕೃಷ್ಣಾ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮೆರವಣಿಗೆಯ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ನ ರಾಮಂತಪುರದ ಗೋಕುಲೇನಗರದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಶ್ರೀಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು ಈ ವೇಳೆ ರಥವನ್ನು ಎಳೆಯುತ್ತಿದ್ದ ವಾಹನ ಕೆಟ್ಟು ನಿಂತಿದ್ದರಿಂದ, ಯುವಕರೆಲ್ಲರೂ ಸೇರಿ ಕೈಯಿಂದಲೇ ದೂಡಿಕೊಂಡು ಮೆರವಣಿಗೆ ಮುನ್ನೆಡೆಸುತ್ತಿದ್ದ ಸಂದರ್ಭ ರಥ ರಸ್ತೆ ಬದಿ ಹಾದುಹೋದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ ಈ ವೇಳೆ ರಥ ದೂಡುತ್ತಿದ್ದ ಒಂಭತ್ತು ಮಂದಿಗೆ ವಿದ್ಯುತ್ ಆಘಾತವಾಗಿದೆ ಪರಿಣಾಮ ಐದು ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದರೆ ನಾಲ್ಕು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಕೃಷ್ಣ ಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (15) ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಗೊಂಡವರಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ಆಪ್ತ ಸಹಾಯಕ ಗಣೇಮೆನ್ ಶ್ರೀನಿವಾಸ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.


















