ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದಲ್ಲಿ ಮೊದಲ ಬಾರಿಗೆ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಭಾರತದ ಗಣಿ ಸಚಿವಾಲಯ ಗುರುವಾರ ಪ್ರಕಟಿಸಿದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 5.9 ಮಿಲಿಯನ್ ಟನ್ಗಳ ಲಿಥಿಯಂ ಊಹಿಸಲಾದ ಸಂಪನ್ಮೂಲಗಳನ್ನು (ಜಿ3) ಮೊದಲ ಬಾರಿಗೆ ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸ್ಥಾಪಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಲಿಥಿಯಂ ಮತ್ತು ಚಿನ್ನ ಸೇರಿದಂತೆ 51 ಖನಿಜ ಬ್ಲಾಕ್ಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅದು ಹೇಳಿದೆ. ಲಿಥಿಯಂ ಒಂದು ಕಬ್ಬಿಣೇತರ ಲೋಹವಾಗಿದೆ ಮತ್ತು ಇವಿ ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಈ 51 ಮಿನರಲ್ ಬ್ಲಾಕ್ಗಳಲ್ಲಿ, 5 ಬ್ಲಾಕ್ಗಳಲ್ಲಿ ಚಿನ್ನ ಮತ್ತು ಇತರ ಬ್ಲಾಕ್ಗಳಲ್ಲಿ ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹಗಳು ಮುಂತಾದ ಸರಕುಗಳಿದ್ದು, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಮುಂತಾದ 11 ರಾಜ್ಯಗಳಲ್ಲಿ ಹರಡಿವೆ. 2018-19 ರ ಕ್ಷೇತ್ರ ಋತುಗಳಿಂದ ಇಲ್ಲಿಯವರೆಗೆ ಜಿ.ಎಸ್.ಐ ನಡೆಸಿದ ಕೆಲಸದ ಆಧಾರದ ಮೇಲೆ ಬ್ಲಾಕ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಮಾರುಕಟ್ಟೆಯಲ್ಲಿ ಅದಾಗಲೇ ಲೀಥಿಯಂ ಬ್ಯಾಟರಿ ಚಾಲಿತ ಇವಿ ಕಾರುಗಳು ಕಾರುಬಾರು ನಡೆಸುತ್ತಿದ್ದು, ಲೀಥಿಯಂ ಮೂಲವಸ್ತುವಿನ ಕಡಿಮೆ ಲಭ್ಯತೆ ಮತ್ತು ಬೆಲೆ ಏರಿಕೆಯಿಂದ ಇವಿ ಕಾರುಗಳ ಬೆಲೆಯೂ ಹೆಚ್ಚಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇವಿ ಬ್ಯಾಟರಿಗಳನ್ನು ಸಿದ್ದಪಡಿಸುವಲ್ಲಿ ಚೀನಾ ಅತಿ ಹೆಚ್ಚು ಪಾಲನ್ನು ಹೊಂದಿದೆ. ಭಾರತವು ಲೀಥಿಯಂ ಅನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದೀಗ ಭಾರತದಲ್ಲಿ ಲೀಥಿಯಂ ನಿಕ್ಷೇಪಗಳು ಪತ್ತೆಯಾಗಿದ್ದು, ಈ ಬ್ಲಾಕ್ ಗಳಿಂದ ಲೀಥಿಯಂಗಳನ್ನು ಹೊರತೆಗೆದಲ್ಲಿ ಇತರ ದೇಶಗಳ ಮೇಲೆ ಭಾರತದ ಅವಲಂಬನೆ ಕಡಿಮೆಯಾಗಿ ಕಡಿಮೆ ಬೆಲೆಗೆ ಇವಿ ಕಾರುಗಳ ಬ್ಯಾಟರಿಗಳನ್ನು ಉತ್ಪಾದಿಸಬಹುದು ಎನ್ನಲಾಗುತ್ತಿದೆ.
ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರವು ಭಾರತದ ಮುಕುಟ ಮಣಿಯಾಗಿದ್ದು, ಪರಿಸರ ಸೂಕ್ಷ್ಮ ಮತ್ತು ಭೂಕಂಪ ಪೀಡಿತ ಪ್ರದೇಶವಾಗಿದೆ. ಈ ಭಾಗದಲ್ಲಿ ಗಣಿಗಾರಿಕೆ ನಡೆಸುವುದು ಎಷ್ಟು ಸುರಕ್ಷಿತ ಎನ್ನುವುದನ್ನು ತಜ್ಞರು ಹೇಳಬೇಕಷ್ಟೆ. ಅವೈಜ್ಞಾನಿಕವಾಗಿ ಎಗ್ಗಿಲ್ಲದೆ ನಡೆಸಿದ ಅಭಿವೃದ್ದಿಯಿಂದಾಗಿ ಜೋಶಿಮಠದಿಂದ ಹಿಡಿದು ಪಶ್ಚಿಮ ಘಟ್ಟಗಳವರೆಗೆ ಬೆಟ್ಟಗಳು ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜಮ್ಮ ಮತ್ತು ಕಾಶ್ಮೀರಕ್ಕೂ ಅದೆ ಗತಿಯಾದರೆ ಎನ್ನುವ ಭಯ ಪರಿಸರ ಪ್ರೇಮಿಗಳನ್ನು ಕಾಡದೆ ಇರದು.












