ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45.70 ಕೋಟಿ ಅನುದಾನಕ್ಕೆ ಒಪ್ಪಿಗೆ

ಮೈಸೂರು: ಚಾಮುಂಡೇಶ್ವರಿ ದೇವಿ ದೇವಸ್ಥಾನದ ಮಹಿಷಾಸುರ ಪ್ರತಿಮೆ ಸುತ್ತಲಿನ ಪ್ರಾಂಗಣ, ದೇವಿಕೆರೆ, ನಂದಿ ಪ್ರತಿಮೆ, ದೇವಿ ಪಾದ, ಪ್ರವಾಸಿಗರ ವೀಕ್ಷಣಾ ಪ್ರದೇಶಗಳ ಸುತ್ತಲಿನ ಅಭಿವೃದ್ಧಿಗೆ ಹಾಗೂ ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದನ್ನು ಪ್ರಸಾದ್ ಯೋಜನೆ ಒಳಗೊಂಡಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಿ ಸನ್ನಿಧಾನ ಅಭಿವೃದ್ಧಿಗೆ ಹಾಗೂ ವಿವಿಧ ಮೂಲ ಸೌಕರ್ಯ ಒದಗಿಸುವ ಕಾಮಗಾರಿಗಳಿಗಾಗಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಪ್ರಸಾದ್ ಯೋಜನೆಯಡಿ 45.70 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

ಚಾಮುಂಡೇಶ್ವರಿ ದೇವಿ ದೇವಸ್ಥಾನದ ಮಹಿಷಾಸುರ ಪ್ರತಿಮೆ ಸುತ್ತಲಿನ ಪ್ರಾಂಗಣ, ದೇವಿಕೆರೆ, ನಂದಿ ಪ್ರತಿಮೆ, ದೇವಿ ಪಾದ, ಪ್ರವಾಸಿಗರ ವೀಕ್ಷಣಾ ಪ್ರದೇಶಗಳ ಸುತ್ತಲಿನ ಅಭಿವೃದ್ಧಿಗೆ ಹಾಗೂ ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಪ್ರದೇಶ ಅಭಿವೃದ್ಧಿ ಪಡಿಸುವುದು ಪ್ರಸಾದ್ ಯೋಜನೆ ಒಳಗೊಂಡಿದೆ.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಪ್ರಸಾದ್ ಯೋಜನೆಯನ್ನು ಜೂನ್ 2014 ರಂದು ಪ್ರಕಟಿಸಿದ್ದು, ಇದೊಂದು ಧಾರ್ಮಿಕ ಗಮ್ಯಸ್ಥಾನಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರಚಾರಪಡಿಸುವ ಹಾಗೂ ದೀರ್ಘಾವಧಿಯಲ್ಲಿ ಧಾರ್ಮಿಕ ಪವಿತ್ರ ಸ್ಥಳಗಳನ್ನು ಪುನರುಜ್ಜೀವನಗೊಳಿಸಿ ಆಧ್ಯಾತ್ಮಿಕ ಅನುಭವವನ್ನು ಯಾತ್ರಿಕರಿಗೆ ತೆರೆದಿಡುವ ಯೋಜನೆಯಾಗಿದೆ.

ಉದ್ದೇಶಗಳು: ಧಾರ್ಮಿಕ ಪ್ರವಾಸೋದ್ಯಮದ ಮೂಲಕ ಹೆಚ್ಚು ಭಾರತೀಯ ಪ್ರವಾಸಿಗರು ಸಾಂಸ್ಕೃತಿಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಪ್ರಯೋಜನೆಗಳನ್ನು ಪಡೆಯುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯಾತ್ರಿಕರ ಪ್ರಯಾಣದ ಅನುಭವವನ್ನು ಸುಧಾರಿಸುವುದು, ಸಮಗ್ರ ಅಭಿವೃದ್ದಿಯನ್ನು ಖಚಿತಪಡಿಸುವುದು, ತೀರ್ಥಯಾತ್ರೆಯನ್ನು ತಡೆರಹಿತ ಮತ್ತು ಮುಕ್ತಗೊಳಿಸುವುದು, ವಸತಿ ಸೌಕರ್ಯಗಳ ಗುಣಮಟ್ಟವನ್ನು ಸುಧಾರಿಸುವುದು, ಭಾರತದ ಶ್ರೀಮಂತ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಣೆ ಮತ್ತು ಉತ್ತೇಜಿಸುವುದನ್ನು ಒಳಗೊಂಡಿದೆ.

ದೇವಾಲಯದ ಮುಂಭಾಗದ ಸಭಾಂಗಣ ಹಾಗೂ ಶೌಚಾಲಯಗಳಿಗೆ ಹೊಸ ರೂಪ ನೀಡುವುದು, ಪಾದರಕ್ಷೆ ಸ್ಟ್ಯಾಂಡ್, ಕ್ಲಾಕ್ ರೂಂ ನಿರ್ಮಾಣ, ಮಹಿಷಾಸುರ ಪ್ರತಿಮೆ ಸುತ್ತಲಿನ ಪೊಲೀಸ್ ಬೂತ್ ಮಾಹಿತಿ ಕೇಂದ್ರ ಕಂಟ್ರೋಲ್ ರೂಂ, ಭಕ್ತರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರಿನ ಘಟಕ, ಕಾರಂಜಿ ಕಲ್ಲಿನ ಮಾದರಿಯ ಪ್ರವೇಶ ದ್ವಾರ, ಕಲ್ಲಿನ ನಾಮಫಲಕಗಳು ಹಾಗೂ ಮೆಟ್ಟಿಲು ಮಾರ್ಗದ ದೇವಿಪಾದದ ಬಳಿ ಕಂಬಿಗಳ ಅಳವಡಿಕೆ ನೀರಿನ ಕೊಳವೆಗಳ ಅಳವಡಿಕೆ ಜೊತೆಗೆ ಸಾರ್ವಜನಿಕರ ಅನೌನ್ಸಮೆಂಟ್ ಇತ್ಯಾದಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು 45.70 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆ ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ದೇಶದ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವುದು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಸುಸ್ಥಿರ ಗ್ರಾಮೀಣ-ನಗರ ಸಂಪರ್ಕವನ್ನು ಉತ್ತೇಜಿಸುವುದು. ಭವಿಷ್ಯದಲ್ಲಿ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಒಳಗೊಂಡಿರುವ ಎಲ್ಲಾ ಪಾಲುದಾರರ ಧನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಈ ಯೋಜನೆಯು ಭಾರತದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಭಾರತದ ಶ್ರೀಮಂತ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ, ಸಂಸ್ಕೃತಿಯನ್ನು ಮತ್ತು ಸಂಪ್ರದಾಯಗಳನ್ನು ರಕ್ಷಿಸಿ ಪ್ರೋತ್ಸಾಹಿಸುತ್ತದೆ.