ನ. 22 ರಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ; 12 ದಿನಗಳಲ್ಲಿ 12 ತಂಡಗಳಿಂದ ನಾಟಕ ಪ್ರದರ್ಶನ

ಉಡುಪಿ: ರಂಗಭೂಮಿ ಉಡುಪಿ ಇದರ ವತಿಯಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ನವೆಂಬರ್ 22ರಿಂದ ಡಿಸೆಂಬರ್ 3 ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ.22ರಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ನಾಟಕ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಎಂದರು.

ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್‌.ಎಸ್‌ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ, ಈ ಸ್ಪರ್ಧೆಯಲ್ಲಿ ಬೆಂಗಳೂರಿನ 5, ಬಳ್ಳಾರಿ, ಮೈಸೂರು, ಮಂಡ್ಯ, ವಿಜಯನಗರ, ಬೆಳಗಾವಿ, ಧಾರವಾಡ ಹಾಗೂ ಉಡುಪಿಯ ತಲಾ ಒಂದು ತಂಡ ಭಾಗವಹಿಸುತ್ತಿದೆ. ಒಟ್ಟು 12 ದಿನಗಳಲ್ಲಿ 12 ನಾಟಕಗಳು ನ.22ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಪ್ರಥಮ ಬಹುಮಾನ ಪಡೆದ ತಂಡಕ್ಕೆ 35 ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ನಗದು ಪುರಸ್ಕಾರ ಹಾಗೂ ಫಲಕ ನೀಡಲಾಗುವುದು. ಅಲ್ಲದೆ, ಶ್ರೇಷ್ಠ ನಿರ್ದೇಶಕ, ನಟ, ನಟಿ, ಪ್ರಸಾಧನ, ರಂಗ ಪರಿಕರ, ಸಂಗೀತ, ಬೆಳಕು, ಹಾಸ್ಯ ನಟ, ಬಾಲ ನಟ, ಶಿಸ್ತಿನ ತಂಡ ಈ ಎಲ್ಲಾ ವಿಭಾಗಗಳಿಗೆ ನಗದು ಸಹಿತ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ್ ರಾವ್, ಎನ್. ರಾಜಗೋಪಾಲ ಬಲ್ಲಾಳ್, ಜತೆ ಕಾರ್ಯದರ್ಶಿ ಶ್ರೀಪಾದ್ ಹೆಗಡೆ ಉಪಸ್ಥಿತರಿದ್ದರು.