ಉಡುಪಿ ಮಹಾಲಕ್ಷ್ಮೀ ಬ್ಯಾಂಕಿನ 42ನೇ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ 2019-20ರ ಆರ್ಥಿಕ ವರ್ಷದ 42ನೇ ವಾರ್ಷಿಕ ಮಹಾಸಭೆಯು ಇಂದು ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಎ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಯಶ್‍ಪಾಲ್ ಎ ಸುವರ್ಣ, ಬ್ಯಾಂಕ್ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ ಎಂದರು.

ಮೀನುಗಾರರಿಗೆ, ಕೃಷಿಕರಿಗೆ ಸರಕಾರದ ವಿವಿಧ ಯೋಜನೆಗಳಾದ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿಯನ್ನು ನಮ್ಮ ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗುವಂತೆ ಮಾಡಲು ಕಾರ್ಯಪ್ರವೃತ್ತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹಾಗೂ ಎಟಿಎಂ ಸೌಲಭ್ಯದೊಂದಿಗೆ ಹವಾನಿಯಂತ್ರಿತವಾಗಿ ನವೀಕೃತಗೊಳ್ಳುತ್ತಿರುವ ಉಚ್ಚಿಲ ಶಾಖೆ ಜನವರಿ ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ಪ್ರಸ್ತಕ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ₹ 5.08 ಕೋಟಿ ಲಾಭಗಳಿಸಿದ್ದು, ಅನುವು ಮಾಡಿದ ನಂತರ ₹1.61 ಕೋಟಿ ನಿವ್ವಳ ಲಾಭ ಗಳಿಸಿದೆ. 2019-20ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿಯು ₹ 157 ಕೋಟಿಗೆ ಹಾಗೂ ಸಾಲ ಮತ್ತು ಮುಂಗಡವು ₹ 131 ಕೋಟಿಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು ₹ 1500.68 ಕೋಟಿ, ದುಡಿಯುವ ಬಂಡವಾಳವು ₹ 18,757.55 ಲಕ್ಷಕ್ಕೆ ಏರಿಕೆಯಾಗಿದ್ದು ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಶೇ. 18 ಡಿವಿಡೆಂಟ್ ಘೋಷಣೆ:
ಬ್ಯಾಂಕಿನ ಸದಸ್ಯರಿಗೆ ಶೇ.18 ಡಿವಿಡೆಂಡ್‍ನ್ನು ಸರ್ವಾನುಮತದಿಂದ ಘೋಷಿಸಿದ್ದು, ಇದರಲ್ಲಿ ಶೇ.3ನ್ನು ಸಮಾಜಕಲ್ಯಾಣ ನಿಧಿಗೆ ವಿನಿಯೋಗಿಸುವಂತೆ ಸದಸ್ಯರಿಂದ ಬಂದ ಸಲಹೆಯನ್ನು ಸಭೆಯ ಮುಂದಿರಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬ್ಯಾಂಕಿನ ನಿವೃತ್ತ ಸಿಬ್ಬಂದಿ ಯಶವಂತ್, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೇಯ ಕುಂದರ್, ಹರ್ಷ ಎಸ್. ಅವರನ್ನು ಅಭಿನಂದಿಸಲಾಯಿತು.

ನಿರ್ದೇಶಕರಾದ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ ಕೋಟ್ಯಾನ್, ಹೇಮನಾಥ ಜೆ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್, ವಿನಯಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಬಿ ಬಿ ಕಾಂಚನ್, ಶಿವರಾಮ ಕುಂದರ್, ಶ್ರೀಮತಿ ವನಜಾ ಹೆಚ್‍ಕಿದಿಯೂರು, ವನಜಾಜೆ ಪುತ್ರನ್, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್ ಕೆ, ಬ್ಯಾಂಕಿನ ಸಲಹೆಗಾರ ಆನಂದ ಎನ್ ಪುತ್ರನ್ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಜಿ.ಕೆ. ಶೀನಾ ಉಪಸ್ಥಿತರಿದ್ದರು.