ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರ ಸುರಕ್ಷಿತ ವಾಪಸಾತಿ: ರಕ್ಷಣಾ ಕಾರ್ಯಕರ್ತರಿಗೆ ಅಭಿನಂದನೆಯ ಸುರಿಮಳೆ

ದೆಹರಾದೂನ್: ನವೆಂಬರ್ 12 ರಿಂದ ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ನಲವತ್ತೊಂದು ಕಾರ್ಮಿಕರನ್ನು ಮಂಗಳವಾರದಂದು ಸುರಕ್ಷಿತವಾಗಿ ಹೊರಗೆಳೆದು ಸ್ಥಳಾಂತರಿಸಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಹೂವಿನ ಹಾರದೊಂದಿಗೆ ಸ್ವಾಗತಿಸಲಾಯಿತು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ವಿಕೆ ಸಿಂಗ್ ಅವರು ಉಪಸ್ಥಿತರಿದ್ದರು.

ಸಿಕ್ಕಿಬಿದ್ದ ಕಾರ್ಮಿಕರನ್ನು ಚಕ್ರಗಳನ್ನು ಅಳವಡಿಸಿದ ಸ್ಟ್ರೆಚರ್‌ಗಳ ಮೇಲೆ 57 ಮೀಟರ್ ಸ್ಟೀಲ್ ಪೈಪ್ ಮೂಲಕ ಹೊರತೆಗೆಯಲಾಯಿತು.

ಸಿಕ್ಕಿಬಿದ್ದಿರುವ ಕಾರ್ಮಿಕರು ಮತ್ತು ಅವರ ಕುಟುಂಬಗಳ ಧೈರ್ಯ ಮತ್ತು ತಾಳ್ಮೆ ಮತ್ತು ರಕ್ಷಣಾ ಸಿಬ್ಬಂದಿಯ ಶೌರ್ಯ ಮತ್ತು ದೃಢತೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕಾಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಮಾತನಾಡಿದ್ದಾರೆ.

ವಿಶೇಷ ಗಣಿಗಾರರು ಕೊನೆಯ 12 ಮೀಟರ್ ದೂರವನ್ನು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅಗೆದು ಎಲ್ಲರ “ನಿರೀಕ್ಷೆಗಳನ್ನು ಸೋಲಿಸಿದ್ದಾರೆ” ಎಂದು ಎನ್‌ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಸದಸ್ಯ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೇನ್ ಹೇಳಿದ್ದಾರೆ.

ಕಾರ್ಮಿಕರ ಸುರಕ್ಷಿತ ವಾಪಾಸಾತಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುತ್ತಿದೆ.