ಜಸ್ಟ್ ₹10 ರೂ.ಗೆ 40ಕಿ.ಮೀ ಚಲಿಸುವ ಬೈಕ್: ವಿದ್ಯಾರ್ಥಿಯಿಂದ ಹೊಸ ಆವಿಷ್ಕಾರ

ಮಡಿಕೇರಿ: ಇಂಧನ ಬೆಲೆ ಗಗನಕ್ಕೇರಿದ್ದು, ವಾಹನದಲ್ಲಿ ಓಡಾಡಲು ಜನರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಆದ್ರೆ, ಈ ಕಷ್ಟಕಾಲದಲ್ಲಿ ವಿದ್ಯಾರ್ಥಿಯೊಬ್ಬ ಬ್ಯಾಟರಿಯಿಂದ ಚಲಿಸುವ ಬೈಕ್ ವೊಂದನ್ನು ಆವಿಷ್ಕಾರಿಸಿದ್ದು, ವಿದ್ಯಾರ್ಥಿಯ ಈ ಪ್ರಯೋಗ ವಾಹನ ಸವಾರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಇಲ್ಲಿ ನೀವು ನೋಡುತ್ತಿರುವ ಬೈಕ್‍ಗೆ ಚಲಿಸಲು ಪೆಟ್ರೋಲ್ ಬೇಕಿಲ್ಲ. ಪೆಟ್ರೋಲ್ ಇಲ್ಲದೆ ಬೈಕ್ ಓಡುತ್ತಾ ಅಂತಾ ನೀವು ಪ್ರಶ್ನೆ ಕೇಳ್ಬಹುದು. ಆದ್ರೆ ಈ ಸುಝುಕಿ ಸಮುರಯಿ ಬೈಕ್ ಓಡ್ತಿರೋದು ಬ್ಯಾಟರಿ ಪವರ್​ನಿಂದ. ಈ ಥರ ಬ್ಯಾಟರಿಯಿಂದ ಚಲಿಸುವ ಬೈಕ್ ಆವಿಷ್ಕಾರ ಮಾಡಿರೋದು ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ನಿವಾಸಿ ಕಟ್ಟೇರ ಗಿಲನ್ ಕರುಂಬಯ್ಯ.

ನೋಡೋದಕ್ಕೆ ಮಾತ್ರ ಇದು ಹಳೆ ಬೈಕ್. ಆದ್ರೆ ಕೊಡಗಿನ ಗಿಲನ್ ಇದೇ ಹಳೆಯ ಬೈಕ್​ಗೆ ಮರುಜೀವ ನೀಡಿದ್ದಾನೆ. ಜಸ್ಟ್​ 10 ರೂಪಾಯಿಗೆ ಬೈಕ್ 40 ಕಿಲೋ ಮೀಟರ್ ಸಾಗುವಂತೆ ಮಾಡಿದ್ದಾನೆ. ಇದು ನೀವು ನಂಬಲೇ ಬೇಕು. ಯುವಕನ ಹೊಸ ಪ್ರಯೋಗಕ್ಕೆ ಶಹಬಾಷ್ ಗಿರಿ ಕೊಡಲೇಬೇಕು.

ಹೌದು, ಮೊದಲಿನಿಂದಲೂ ಇಲೆಕ್ಟ್ರಿಕಲ್ ಮೆಕ್ಯಾನಿಕ್‍ನಲ್ಲಿ ಆಸಕ್ತಿ ಇದ್ದ ಕಾರಣಕ್ಕೆ ಲಾಕ್‍ಡೌನ್‍ನಲ್ಲಿ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ ಮಾಡಿದ್ದಾನೆ ಗಿಲನ್. ಸ್ಥಳೀಯರೊಬ್ಬರಿಂದ ಹಳೆ ಬೈಕ್ ಖರೀದಿಸಿ ಅದಕ್ಕೆ 750 ವ್ಯಾಟ್ ಮೋಟಾರ್, 48 ವೋಲ್ಟ್ ಸಾಮಥ್ರ್ಯದ 24 ಆ್ಯಮ್ಸ್ ಲೆಡಿಸಿಡ್ ಬ್ಯಾಟರಿ ಉಪಯೋಗಿಸಿ ಹೊಸ ಪ್ರಯೋಗ ಮಾಡಿದ್ದಾನೆ. ಗೇರ್ ಬದಲು ಹ್ಯಾಂಡಲ್‍ನಲ್ಲಿ ಮೂರು ಬಗೆಯ ಪವರ್ ಮೋಡ್ ತಂತ್ರಜ್ಞಾನವನ್ನೂ ಅಳವಡಿಸಿದ್ದಾನೆ.

ವಿದ್ಯುತ್‍ನಿಂದ ಬ್ಯಾಟರಿ ಚಾರ್ಜ್ ಮಾಡಬಹುದಾಗಿದ್ದು, ಪೂರ್ತಿ ಚಾರ್ಜ್ ಆಗೋಕೆ ಆರು ಗಂಟೆ ಬೇಕು. ಒಂದೂವರೆ ಯೂನಿಟ್ ವಿದ್ಯುತ್ ಇದಕ್ಕೆ ಬಳಕೆಯಾಗುತ್ತೆ. ಇಷ್ಟು ಶಕ್ತಿಯಲ್ಲಿ 40 ಕಿಮೀ ಮೈಲೇಜ್ ನೀಡುತ್ತೆ ಈ ಬೈಕ್. ಇಬ್ಬರು ಆರಾಮಾಗಿ ಸಂಚರಿಸಬಹುದಾದ ಬೈಕ್‍ನಲ್ಲಿ 40 ಕಿಲೋ ಮೀಟರ್​ಗೆ ಖರ್ಚಾಗೋದು ಕೇವಲ 10 ರೂಪಾಯಿ.
ಗಿಲನ್ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ವಿದ್ಯಾರ್ಥಿಯ ಈ ಪ್ರಯತ್ನಕ್ಕೆ ಮುಂದೆ ಉತ್ತಮ ಫಲಿತಾಂಶ ಸಿಗಲಿ ಎನ್ನುವುದು ಎಲ್ಲರ ಆಶಯವಾಗಿದೆ.