ಉಡುಪಿ: 40 ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ ಎಂದು ಟಾಲಿವುಡ್ ನ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ಹೇಳಿದರು.
ಉಡುಪಿ ಕೃಷ್ಣಮಠಕ್ಕೆ ಇಂದು ಭೇಟಿ ನೀಡಿದ ಅವರು ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ. ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ರಿಷಬ್ ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದರು.