ಭಟ್ಕಳ: ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹಾಡುವಳ್ಳಿ ಒಣಿಬಾಗಿಲು ನಿವಾಸಿ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್(60), ಅವರ ಮಗ ರಾಘು (ರಾಜು ಭಟ್) (40) ಹಾಗೂ ಸೊಸೆ ಕುಸುಮಾ ಭಟ್(35) ಕೊಲೆಯಾದವರು.
ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಮರಣದ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು. ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಇದೇ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ ಶ್ರೀಧರ ಭಟ್ ಶುಕ್ರವಾರ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆಯುವ ವೇಳೆ ಹತ್ತು ವರ್ಷದ ಮಗು ಪಕ್ಕದ ಮನೆಯಲ್ಲಿತ್ತು. ನಾಲ್ಕು ವರ್ಷದ ಇನ್ನೊಂದು ಮಗು ಮಲಗಿತ್ತು. ಹೀಗಾಗಿ ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.