ಶಿವಮೊಗ್ಗ: ಸಾಗರದ ತಾಲೂಕು ಉಪವಿಭಾಗದ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು, ವಾಂತಿ ಸೇರಿದಂತೆ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಹತ್ತು ತಿಂಗಳಿಂದ 12 ವರ್ಷದೊಳಗಿನ 14 ಮಕ್ಕಳ ಪೈಕಿ ನಾಲ್ವರು ಮಕ್ಕಳ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಎಲ್ಲಾ ಮಕ್ಕಳಿಗೆ ಆ್ಯಂಟಿಬಯೋಟಿಕ್ ಚುಚ್ಚುಮದ್ದನ್ನು ಆಸ್ಪತ್ರೆಯ ದಾದಿಯರು ನೀಡಿದ್ದು, ಆ ಬಳಿಕ ಮಕ್ಕಳ ಆರೋಗ್ಯ ಹದಗೆಟ್ಟಿದೆ.
ಮೂವರನ್ನು ಶಿವಮೊಗ್ಗದ ಜಿಲ್ಲಾ ಮೆಕ್ಗಾನ್ ಜನರಲ್ ಆಸ್ಪತ್ರೆಯಲ್ಲಿ ಹಾಗೂ ಒಂದು ಮಗುವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಪ್ರತಿಕ್ರಿಯಿಸಿ ‘ಜೂ.26ರಂದು ಬೆಳಗ್ಗೆ ಮಕ್ಕಳಿಗೆ ಇದೇ ಚುಚ್ಚುಮದ್ದು ನೀಡಲಾಗಿದ್ದು, ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಆದರೆ ಸಂಜೆ ಚುಚ್ಚುಮದ್ದು ನೀಡಿದ ನಂತರ ನಾಲ್ಕು ಮಕ್ಕಳ ಆರೋಗ್ಯ ಹದಗೆಟ್ಟಿದೆ ಆದರೆ ಉಳಿದ ಮಕ್ಕಳು ಆರೋಗ್ಯವಾಗಿದ್ದಾರೆ. ಚುಚ್ಚುಮದ್ದು ನೀಡುವಾಗ ಉಂಟಾದ ತಾಂತ್ರಿಕ ದೋಷವು ಅದರ ಹಿಂದಿನ ಕಾರಣವಾಗಿರಬಹುದು’ ಎಂದಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಚುಚ್ಚುಮದ್ದು ನೀಡಿದ ಕೂಡಲೇ ದಾದಿಯರು ಬೇರೆ ಯಾವುದಾದರೂ ಔಷಧವನ್ನು ನೀಡಿರಬಹುದು ಮತ್ತು ಇದು ಈ ಘಟನೆಗೆ ಕಾರಣವಾಗಿರಬಹುದು. ಅವರು ಪೃಷ್ಠದ ಬದಲಿಗೆ ಭುಜದ ಮೇಲೆ ಇಂಜೆಕ್ಷನ್ ನೀಡಿರಬಹುದು. ಆದರೆ ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿಲ್ಲ. ಕೇಸ್ ಶೀಟ್ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಸ್ಥಳೀಯ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ಘಟನಾ ಸ್ಥಳಕ್ಕೆ ಧಾವಿಸಿ, ಸಮಸ್ಯೆಯ ಬಗ್ಗೆ ಗಮನಹರಿಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.