380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯ ಇತ್ತೀಚೆಗಷ್ಟೇ ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿನ ಬಂಡೆಯ ರಚನೆಯಿಂದ ಪಡೆಯಲಾಗಿದೆ. ಇದುವರೆಗೆ ಕಂಡುಬಂದಿರುವ ಅತ್ಯಂತ ಹಳೆಯ ಪಳೆಯುಳಿಕೆ ಇದಾಗಿದೆ ಎಂದು ದ ವೆಥರ್ ಚಾನೆಲ್ ಇಂಡಿಯಾ ವರದಿ ಮಾಡಿದೆ.
ಈ ಹೃದಯವು ಆರ್ತ್ರೋಡೈರ್ಸ್ ಅಥವಾ ಗೊಗೊ ಮೀನು ಎಂದು ಕರೆಯಲ್ಪಡುವ ಶಸ್ತ್ರಸಜ್ಜಿತ ದವಡೆಯ ಮೀನುಗಳ ವರ್ಗಕ್ಕೆ ಸೇರಿದೆ. ಆದರೆ ಅದಕ್ಕಿಂತಲೂ ವಿಸ್ಮಯಕಾರಿ ಸಂಗತಿಯೆಂದರೆ ಪಳೆಯುಳಿಕೆಯು ಚಪ್ಪಟೆಯಾಗಿರದೆ ಅಪರೂಪದ ಮೂರು ಆಯಾಮಗಳಲ್ಲಿ ಸಂರಕ್ಷಿಸಲ್ಪಟ್ಟಿರುವುದು ಕಂಡುಬಂದಿದೆ. ಹೃದಯದ ಪಕ್ಕದಲ್ಲಿ ಪಳೆಯುಳಿಕೆಗೊಂಡ ಹೊಟ್ಟೆ, ಕರುಳು ಮತ್ತು ಯಕೃತ್ತು ಕೂಡ ದೊರಕಿದೆ.
ನ್ಯೂಟ್ರಾನ್ ಕಿರಣಗಳು ಮತ್ತು ಸಿಂಕ್ರೊಟ್ರಾನ್ ಕ್ಷ-ಕಿರಣಗಳನ್ನು ಬಳಸಿಕೊಂಡು ಹೃದಯದ ಮಾದರಿಗಳನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ಮೃದು ಅಂಗಾಂಶಗಳ ಮೂರು-ಆಯಾಮದ ಚಿತ್ರಗಳನ್ನು ಸುತ್ತಮುತ್ತಲಿನ ಕಲ್ಲಿನ ಆವರಣದಿಂದ ತೆಗೆದುಹಾಕುವ ಅಗತ್ಯವಿಲ್ಲದೆ ನಿರ್ಮಿಸಲಾಗಿದೆ. ಉನ್ನತ ಕಶೇರುಕಗಳಲ್ಲಿರುವಂತೆಯೇ ಹೃದಯವು ಒಂದರ ಮೇಲೊಂದರಂತೆ ಎರಡು ಕೋಣೆಗಳನ್ನು ಹೊಂದಿದೆ ಎಂದು ಸ್ಕ್ಯಾನ್ಗಳು ಬಹಿರಂಗಪಡಿಸಿದ್ದಾವೆ. ಕರುಳುಗಳು ಸುರುಳಿಯಾಕಾರಲ್ಲಿದ್ದು, ಹೊಟ್ಟೆಯು ಸ್ನಾಯುಗಳ ಪದರದೊಂದಿಗೆ ಗ್ರಂಥಿಯನ್ನು ಹೊಂದಿದ್ದು ಮತ್ತು ದೊಡ್ಡ ಯಕೃತ್ತು ಮೀನುಗಳು ನೀರಿನಲ್ಲಿ ತೇಲುವಂತೆ ಸಹಾಯ ಮಾಡುತ್ತಿದ್ದವು ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಇಂದಿನ ಶಾರ್ಕ್ಗಳಂತೆಯೆ ಈ ಮೀನುಗಳು ತಮ್ಮ ಹೃದಯವನ್ನು ಅಕ್ಷರಶಃ ತಮ್ಮ ಬಾಯಿಯಲ್ಲಿ ಮತ್ತು ಕಿವಿರುಗಳ ಕೆಳಗೆ ಹೊಂದಿವೆ ಎಂದು ಕರ್ಟಿನ್ ವಿಶ್ವವಿದ್ಯಾಲಯದ ಅಧ್ಯಯನ ಲೇಖಕಿ ಪ್ರೊಫೆಸರ್ ಕೇಟ್ ಟ್ರಿನಾಜ್ಸ್ಟಿಕ್ ಹೇಳಿದ್ದಾರೆ. ದವಡೆಗಳಿಗೆ ಸರಿಹೊಂದುವಂತೆ ತಲೆ ಮತ್ತು ಕತ್ತಿನ ಪ್ರದೇಶವು ಅವುಗಳ ರಚನೆಯನ್ನು ಹೇಗೆ ಬದಲಾಯಿಸಿರಬೇಕು ಎಂಬುದರ ಕುರಿತು ಒಳನೋಟಗಳನ್ನು ಈ ಸಂಶೋಧನೆಯು ಒದಗಿಸುತ್ತದೆ. ಇದು ಮಾನವ ಅಂಗರಚನಾಶಾಸ್ತ್ರದ ರಚನೆಯ ಬಗ್ಗೆ ಬಹಳಷ್ಟು ಬಹಿರಂಗಪಡಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೃಷ್ಟಿಯಲ್ಲಿ ಜೀವಿಗಳ ವಿಕಾಸವಾದವನ್ನು ಅಧ್ಯಯನ ಮಾಡಲು ಇಂತಹ ಪಳೆಯುಳಿಕೆಗಳು ಸಹಾಯ ಮಾಡುತ್ತವೆ. ಈ ಪಳೆಯುಳಿಕೆಗಳಿಂದ ಮಾನವನ್ನನ್ನೂ ಸೇರಿಸಿ ಎಲ್ಲಾ ಜೀವಿಗಳ ವಿಕಾಸವಾದದ ಹಾದಿಯನ್ನು ಅವಲೋಕಿಸಬಹುದು.
ಚಿತ್ರಕೃಪೆ: ವೈ ಫಿಲಿಪ್ಸ್, ಕೇಟ್ ಟ್ರಿನಾಜ್ಸ್ಟಿಕ್ / ಕರ್ಟಿನ್ ವಿಶ್ವವಿದ್ಯಾಲಯ/ ಟ್ವಿಟರ್