ಮನ್ನಾರ್ ಕೊಲ್ಲಿಯಲ್ಲಿ 20 ಕೋಟಿ ರೂ. ಮೌಲ್ಯದ 33 ಕೆಜಿ ಚಿನ್ನ ವಶ: ಭಾರತೀಯ ಕೋಸ್ಟ್ ಗಾರ್ಡ್- ಕಂದಾಯ- ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ

ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಕಂದಾಯ- ಗುಪ್ತಚರ ನಿರ್ದೇಶನಾಲಯ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಮನ್ನಾರ್ ಕೊಲ್ಲಿ ಪ್ರದೇಶದಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಸುಮಾರು ₹20.2 ಕೋಟಿ ಮೌಲ್ಯದ 32.6 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಚಿನ್ನವು ಶ್ರೀಲಂಕಾದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿತ್ತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರತೀಯ ಕೋಸ್ಟ್ ಗಾರ್ಡ್‌ನ ಡೆಪ್ಯುಟಿ ಡೈರೆಕ್ಟರ್ ಜನರಲ್ (ಕಾರ್ಯಾಚರಣೆ) ಆಗಿರುವ ಇನ್ಸ್‌ಪೆಕ್ಟರ್ ಜನರಲ್ ಮನೀಶ್ ಪಾಠಕ್ ಮಾಹಿತಿ ನೀಡಿ, “ಡಿಆರ್‌ಐನಿಂದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಭಾರತೀಯ ಕೋಸ್ಟ್ ಗಾರ್ಡ್ ಭಾರತ-ಶ್ರೀಲಂಕಾದ ಕಡಲ ಗಡಿಯ ಬಳಿ ಮನ್ನಾರ್ ಕೊಲ್ಲಿಯಲ್ಲಿ ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯನ್ನು ಕಳೆದ ಮೂರು ದಿನಗಳಿಂದ ನಡೆಸಲಾಗುತ್ತಿದೆ. ಭಾರತೀಯ ಕೋಸ್ಟ್ ಗಾರ್ಡ್, ಡಿಆರ್ಐ ಮತ್ತು ಕಸ್ಟಮ್ಸ್ ಜಂಟಿ ಪ್ರಯತ್ನಗಳು 20 ಕೋಟಿ ರೂ ಮೌಲ್ಯದ ಸುಮಾರು 33 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು” ಎಂದು ಅವರು ಹೇಳಿದ್ದಾರೆ.

ಸಮುದ್ರದಲ್ಲಿ ಅನುಮಾನಾಸ್ಪದ ಮೀನುಗಾರಿಕೆ ದೋಣಿಗಳ ಮೇಲೆ ನಿಕಟ ನಿಗಾ ಇರಿಸಲಾಗಿತ್ತು. ಅಟ್ಟಿಸಿಕೊಂಡು ಹೋದಾಗ ದೋಣಿಗಳು ತಪ್ಪಿಸಿಕೊಳ್ಳಲು ನೋಡಿದವು. ಆದರೆ ಒಂದು ದೋಣಿಯನ್ನು ಸೆರೆಹಿಡಿಯಲಾಯಿತು, ಇನ್ನೊಂದು ದೋಣಿಯಲ್ಲಿದ್ದ ಚಿನ್ನವನ್ನು ಸಮುದ್ರಕ್ಕೆ ಎಸೆಯಲಾಯಿತು. ಸಮುದ್ರದಿಂದ ಚಿನ್ನವನ್ನು ಹೊರತೆಗೆಯಲು ಇಂದು ಬೆಳಗಿನ ಜಾವದವರೆಗೂ ನಿರಂತರ ಡೈವಿಂಗ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಿನ ನಾಯಕತ್ವವು ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಅಸಹಿಷ್ಣುತೆ ಹೊಂದಿದೆ. ಭಾರತೀಯ ಕರಾವಳಿಯಿಂದ ಎಲ್ಲಾ ರೀತಿಯ ದೇಶವಿರೋಧಿಗಳನ್ನು ನಿಗ್ರಹಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯಲಿದೆ ಎಂದು ಅವರು ಮಾಧ್ಯಮಕ್ಕೆ ಹೇಳಿದ್ದಾರೆ.