ಉಡುಪಿ: ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಎಂಡಿಎಂಎ ಮಾದಕ ವಸ್ತುವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ತಾಲ್ಲೂಕಿನ ಉದ್ಯಾವರದ ಪಳ್ಳಿಗುಡ್ಡೆಯ ಅಕ್ಬರ್ ಮಹಮ್ಮದ್ ಬ್ಯಾರಿ (44) ಹಾಗೂ ಬೆಂಗಳೂರಿನ ಎಂ.ಎಸ್. ಪಾಳ್ಯದ ಸೈಯದ್ ಸುಹೇಲ್ (26) ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸೆ.17ರ ಮಧ್ಯರಾತ್ರಿ 12.10ರ ಸುಮಾರಿಗೆ ಪೆರಂಪಳ್ಳಿ ಸೇತುವೆ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಂಗಳೂರಿನಿಂದ ಬಂದಿದ್ದ ಎನ್ನಲಾದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸಿದರು.
ಈ ವೇಳೆ ಕಾರಿನಲ್ಲಿ ₹1 ಲಕ್ಷ ಮೌಲ್ಯದ 30 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

ಜತೆಗೆ ₹40 ಸಾವಿರ ಮೌಲ್ಯದ ನಾಲ್ಕು ಮೊಬೈಲ್ಗಳು, ₹5 ಸಾವಿರ ಮೌಲ್ಯದ ಡಾಂಗಲ್, ₹9,500 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ₹4.54 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ ಎಂಡಿಎಂಎ ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಣಿಪಾಲ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಸಿ) ಅಡಿ ಪ್ರಕರಣ ದಾಖಲಾಗಿದೆ. ಪಿಎಸ್ಐ ತಿಮ್ಮೇಶ್ ಬಿ.ಎನ್. ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.















