ಮುಂಬೈ: ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸುಮಾರು 3,000ಕ್ಕೂ ಹೆಚ್ಚು ಎಲ್ಪಿಜಿ (LPG) ಸಿಲಿಂಡರ್ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಎಚ್ಪಿಸಿಎಲ್ನ ಪಾತಾಳಗಂಗಾ ಎಲ್ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸಾವಿರಾರು ಸಿಲಿಂಡರ್ಗಳು ಪಾತಾಳಗಂಗಾ ನದಿಯಲ್ಲಿ ತೇಲಿ ಹೋಗಿವೆ. ನದಿಯಲ್ಲಿ ಸಿಲಿಂಡರ್ಗಳು ತೇಲುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರವಾಹದ ನೀರಿನ ರಭಸದಿಂದ ಘಟಕದಲ್ಲಿದ್ದ ಸಿಲಿಂಡರ್ಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಅವುಗಳಲ್ಲಿ ಕೆಲವು ಅನಿಲ ತುಂಬಿದ ಸಿಲಿಂಡರ್ಗಳಾಗಿದ್ದರೆ, ಇನ್ನೂ ಕೆಲವು ಖಾಲಿ ಸಿಲಿಂಡರ್ಗಳಾಗಿದ್ದವು.
ಈ ಹಿನ್ನೆಲೆಯಲ್ಲಿ ನದಿಯಲ್ಲಿ ಅಥವಾ ಸುತ್ತಮುತ್ತ ತೇಲಿ ಬಂದಿರುವ ಯಾವುದೇ ಸಿಲಿಂಡರ್ಗಳ ಬಳಿ ಹೋಗದಂತೆ ಹಾಗೂ ಅವುಗಳನ್ನು ಮುಟ್ಟದಂತೆ ಸ್ಥಳೀಯರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕೊಚ್ಚಿಹೋಗಿರುವ ಎಲ್ಲ ಸಿಲಿಂಡರ್ಗಳನ್ನು ಪತ್ತೆಹಚ್ಚುವ ಮತ್ತು ಸುರಕ್ಷಿತವಾಗಿ ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದೆ.















