ಜುರಾಸಿಕ್ ಪಾರ್ಕ್ ಚಲನಚಿತ್ರ ನೋಡಿದವರಿಗೆ ಈ ವಿಷಯದ ಬಗ್ಗೆ ತಿಳಿದಿರುತ್ತದೆ. ಮರದ ರಾಳದೊಳಗೆ ಬಂಧಿಯಾಗಿದ್ದ ಸೊಳ್ಳೆಯ ಪಳೆಯುಳಿಕೆಯ ರಕ್ತದಿಂದ ಡೈನೋಸಾರ್ ಗಳ ಡಿ.ಎನ್.ಎ ಅನ್ನ್ನು ಹೊರತೆಗೆದು ದೈತ್ಯಾಕಾರದ ಜೀವಿಗಳನ್ನು ಮರು ಸೃಷ್ಟಿಸುವ ಜುರಾಸಿಕ್ ಪಾರ್ಕ್ ಚಿತ್ರ ನೋಡದೆ ಇರುವವರಿಲ್ಲ. ಈ ಕಥೆ ಕಾಲ್ಪನಿಕವಾದರೂ ಈ ರೀತಿ ಮರದ ರಾಳ, ಮಂಜುಗಡ್ಡೆಯೊಳಗೆ ಮಿಲಿಯಾಂತರ ವರ್ಷಗಳಿಂದ ಬಂಧಿಯಾಗಿರುವ ಕ್ರಿಮಿ-ಕೀಟಗಳು ನಿಜವಾಗಿಯೂ ಇರುತ್ತವೆ ಮತ್ತು ಅವು ಭೂಮಿಯ ಜೀವವಿಕಾಸದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ.
ಅಂಬರ್ ಎಂದರೆ ಪಳೆಯುಳಿಕೆಗೊಂಡ ಮರದ ರಾಳವಾಗಿದ್ದು, ನವಶಿಲಾಯುಗದ ಕಾಲದಿಂದಲೂ ಅದರ ಬಣ್ಣ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಮೆಚ್ಚುಗೆ ಪಡೆದಿದೆ. ಸಂಶೋಧಕರಿಗೆ ಇಂತಹುದೇ ಒಂದು ಅಂಬರ್ ನ ತುಣುಕು ಡೊಮಿನಿಕನ್ ರಿಪಬ್ಲಿಕ್ ನಲ್ಲಿ ದೊರೆತಿದ್ದು, ಇದರೊಳಗೆ ವಿಶಿಷ್ಟ ಭಂಗಿಯಲ್ಲಿರುವಂತಹ ಮಿಡತೆ ಜಾತಿಯ ಒಂದು ಕೀಟ ಮ್ಯಾಂಟಿಸ್ ನ ಪಳೆಯುಳಿಕೆ ದೊರೆತಿದೆ. ಸಂಶೋಧನಾ ಜಗತ್ತಿನಲ್ಲಿ ಇದನ್ನು ಪ್ರೇಯಿಂಗ್ ಮ್ಯಾಂಟಿಸ್ ಎಂದು ಕರೆಯಲಾಗುತ್ತದೆ. ಈ ಮ್ಯಾಂಟಿಸ್ 30 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳ ಅಂಬೋಣ. ಆದರೆ ಇನ್ನು ಕೆಲವು ಸಂಶೋಧಕರು 12 ದಶಲಕ್ಷ ಅಥವಾ 23 ದಶಲಕ್ಷದಿಂದ 33.9 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ವಾದಿಸುತ್ತಾರೆ. ಈ ಅಂಬರ್ ಸ್ವತಃ ಅಳಿದಿರುವ ಹೈಮೆನಿಯಾ ಪ್ರೊಟೆರಾ ಎಂಬ ಮರದಿಂದ ಬಂದಿದೆ, ಇದು ಇತಿಹಾಸಪೂರ್ವ ಕಾಲದ ದ್ವಿದಳ ಧಾನ್ಯದ ಮರವಾಗಿದೆ.
ಕುತೂಹಲಕಾರಿ ವಿಷಯವೆಂದರೆ ಈ ಮಿಡತೆ ರಾಳದೊಳಗೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದೆ. ಮಾಂಟಿಸ್‌ನ ವಿಶಿಷ್ಟವಾದ ತ್ರಿಕೋನ ತಲೆ ಮತ್ತು ಉಬ್ಬುವ ಕಣ್ಣುಗಳನ್ನು ಇಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು. ಇದು ಪ್ರಕೃತಿಯ ವೈಶಿಷ್ಟ್ಯಕ್ಕೂ ಕೈಗನ್ನಡಿ ಹಿಡಿದಂತಿದೆ. ಹಳದಿ ಬಣ್ಣದ ಅರೆ ಪಾರದರ್ಶಕ ರಾಳದೊಳಗೆ ಮಿಲಿಯಾಂತರ ವರ್ಷಗಳಿಂದ ಬಂಧಿಯಾಗಿರುವ ಈ ಮಿಡತೆ ಭೂಮಿಯ ಇತಿಹಾಸದ ಜೀವಂತ ಕುರುಹಾಗಿದೆ. ಈ ನಿರ್ದಿಷ್ಟವಾದ ಮ್ಯಾಂಟಿಸ್ ಅಂಬರ್ ಅನ್ನು ಮೊದಲು 2016 ರಲ್ಲಿ ಹೆರಿಟೇಜ್ ಆಕ್ಷನ್ ಮೂಲಕ ಮಾರಾಟ ಮಾಡಲಾಗಿದೆ. ಒಂದು ಇಂಚಿನ ಎತ್ತರದ ತುಣುಕು ಬರೋಬ್ಬರಿ 6,000 ಡಾಲರ್ ಗೆ ಮಾರಾಟವಾಗಿದೆ.
ಈ ಅಂಬರ್ ಅಥವಾ ರಾಳಗಳು ಆಣ್ವಿಕ ಪಾಲಿಮರೀಕರಣ ಪ್ರಕ್ರಿಯೆಯ ಮೂಲಕ ರಚನೆಯಾಗುತ್ತವೆ. ಕೋಟಿಗಟ್ಟಲೆ ವರ್ಷಗಳವರೆಗೆ ಕೊಳೆಯದೆ ಸಮಾಧಿಯಾಗಿ ಉಳಿಯುವ ಮರದ ಕೋಪಲ್ ಗಳು ಅಂಬರ್ ಗಳಾಗಿ ರೂಪುಗೊಳ್ಳುತ್ತವೆ. ಈ ಪ್ರಕ್ರಿಯೆಯ ಮಧ್ಯ ಮರದಲ್ಲಿರುವ ಕ್ರಿಮಿ ಕೀಟಗಳು ಇದರೊಳಗೆ ಬಂಧಿಯಾಗಿ ಮಿಲಿಯಾಂತರ ವರ್ಷಗಳವರೆಗೆ ಕೊಳೆಯದೆ ಹಾಗೆಯೆ ಉಳಿದು ಬಿಡುತ್ತವೆ. ಕೋಪಲ್ ಮತ್ತು ಅಂಬರ್ ಗಳನ್ನು ಸಾವಯವ ರತ್ನ ಕಲ್ಲು ಎಂದೂ ಕರೆಯುತ್ತಾರೆ. ಇವುಗಳನ್ನು ಆಭರಣಗಳಲ್ಲೂ ಬಳಸಲಾಗುತ್ತದೆ. ಪ್ರತಿ ಗ್ರಾಂಗೆ 13-15 ಡಾಲರ್ ಬೆಲೆ ಬಾಳುವ ಅಂಬರ್ ಸ್ಪಷ್ಟವಾಗಿದ್ದಷ್ಟೂ ಹೆಚ್ಚು ಬೆಲೆ ಉಳ್ಳವುಗಳಾಗಿರುತ್ತವೆ. ತನ್ನೊಳಗೆ ಒಮ್ಮೆ ಜೀವಂತವಾಗಿರುವ ಇತರ ವಸ್ತುಗಳನ್ನು ಹಿಡಿದಿಟ್ಟಿರುವ ಸಾಮರ್ಥ್ಯಕ್ಕಾಗಿ ಬಾಲ್ಟಿಕ್ ಅಂಬರ್ ಗಳು ವಿಶಿಷ್ಟವಾಗಿರುತ್ತವೆ.
ಚಿತ್ರಕೃಪೆ: ಹೆರಿಟೇಜ್ ಆಕ್ಷನ್
ಮೂಲ:My Modern Met