ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್‌ಪುರ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ವಿರುದ್ಧ ದೂರು ನೀಡಿರುವ ವೀಡಿಯೋ ವೈರಲ್ ಆಗಿದೆ. ಮಗು ತನ್ನ ತಾಯಿಯ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರಿಗೆ ಭಾನುವಾರ ದೂರು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಿಯಾಂಕಾ ನಾಯಕ್ ಕರ್ತವ್ಯದಲ್ಲಿರುವ ಬುರ್ಹಾನ್‌ಪುರ್ ಠಾಣೆಗೆ ಈ ಮಗು ಬಂದು ತಾಯಿ ಮೇಲೆ ದೂರು ನೀಡಬೇಕು ಎಂದಿದೆ. ಮಗುವಿನ ದೂರನ್ನು ಬರೆಯಲು ಪ್ರಿಯಾಂಕ ಕಾಗದ ಮತ್ತು ಪೆನ್ನು ತೆಗೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ, ಹುಡುಗ ತಾಯಿ ತನ್ನ ಚಾಕೋಲೇಟ್ ಕದ್ದಿದ್ದಾರೆ ಎಂದು ಹೇಳಿಕೊಳ್ಳುವುದು ಕೇಳಿಬಂದಿದ್ದು ಅದನ್ನು ಪ್ರಿಯಾಂಕ ಪೇಪರ್‌ನಲ್ಲಿ ಬರೆದಿದ್ದಾರೆ.
बच्चे ने मम्मी पर थप्पड़ मारने की भी शिकायत लिखवाई | Unseen India pic.twitter.com/8OZkTdZrHK
— UKan (@UKanMovement) October 17, 2022
ಮಗುವನ್ನು ಸ್ನಾನ ಮಾಡಿಸಿದ ಬಳಿಕ ದೃಷ್ಠಿಯಾಗದಂತೆ ಕಪ್ಪು ಕಾಡಿಗೆ ಹಾಕಲು ಬಿಡದ ಕಾರಣ ತಾಯಿ ಆತನನ್ನು ಹಠಮಾರಿ ಎಂದು ಗದರಿಸಿದ ನಂತರ ಮಗು ಪೊಲೀಸರಿಗೆ ದೂರು ನೀಡಲು ಒತ್ತಾಯಿಸಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ. ಮಗು ತನ್ನ ತಾಯಿಯ ವಿರುದ್ಧ ದೂರು ನೀಡುವಂತೆ ಒತ್ತಾಯಿಸಿದಾಗ, ತಂದೆ ಆತನನ್ನು ಹತ್ತಿರದ ಪೊಲೀಸ್ ಪೋಸ್ಟ್‌ಗೆ ಕರೆದೊಯ್ದಿದ್ದಾರೆ.
ವೀಡಿಯೋ ವೈರಲ್ ಆದ ನಂತರ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಂಗಳವಾರ ಹುಡುಗನಿಗೆ ಕರೆ ಮಾಡಿ ಆತನಿಗೇನು ಬೇಕೆಂದು ಕೇಳಿ, ಮುಂಬರುವ ದೀಪಾವಳಿ ಹಬ್ಬದಂದು ಅವನಿಗೆ ಚಾಕೊಲೇಟ್ ಮತ್ತು ಬೈಸಿಕಲ್ ಕಳುಹಿಸುವ ಭರವಸೆ ನೀಡಿದ್ದಾರೆ.
ಬುರ್ಹಾನ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು ಬಾಲಕನ ತಂದೆಯೊಂದಿಗೆ ಮಾತನಾಡಿದ್ದು, ಮಗು ಪೊಲೀಸರ ಬಗ್ಗೆ ಆಕರ್ಷಣೆ ಹೊಂದಿದೆ ಮತ್ತು ಅವರ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿದೆ ಎಂದು ಹೇಳಿದ್ದಾರೆ. ಬಾಲಕನಿಗೆ ಸಾಂತ್ವನ ಹೇಳಿದ ಮತ್ತು ಯಾರು ಬೇಕಾದರೂ ನಿರ್ಭೀತಿಯಿಂದ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು ಎಂಬ ಸಂದೇಶವನ್ನು ರವಾನಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕುಮಾರ್ ಶ್ಲಾಘಿಸಿದ್ದಾರೆ.












