ನಾಂದೇಡ್ (ಮಹಾರಾಷ್ಟ್ರ) : ಮಹಾರಾಷ್ಟ್ರದಲ್ಲಿ ಆರೋಗ್ಯ ಸೇವೆ ತೀವ್ರ ಕುಸಿತ ಕಾಣುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.
ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣಮೃದಂಗ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ಥಾಣೆಯ ಸರ್ಕಾರಿ ಆಸ್ಪತ್ರೆಯಲ್ಲಿ 12 ತಾಸಿನಲ್ಲಿ 17 ಮಂದಿ ಸಾವಿಗೀಡಾದ ಘಟನೆ ಸಂಚಲನ ಉಂಟು ಮಾಡಿತ್ತು. ಇದೀಗ ಅಂಥದ್ದೇ ಮತ್ತೊಂದು ದುರ್ಘಟನೆ ನಡೆದಿದ್ದು, ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆನಾಂದೇಡ್ನ ಆಸ್ಪತ್ರೆಯಲ್ಲಿ ಒಂದೇ ದಿನದ ಅವಧಿಯಲ್ಲಿ 12 ಮಕ್ಕಳು ಸೇರಿ 24 ಮಂದಿ ಸಾವಿಗೀಡಾಗಿದ್ದಾರೆ.
ಆಸ್ಪತ್ರೆಯಲ್ಲಿ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದರಿಂದ ರೋಗಿಗಳಿಗೆ ಸೇವೆ ನೀಡಲು ತೀವ್ರ ತೊಂದರೆಯಾಗುತ್ತಿದೆ. ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಡದ ಕಾರಣ ಔಷಧ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಸೇವಾ ವೈದ್ಯರು ಮತ್ತು ಔಷಧಿಯ ಕೊರತೆ ಉಂಟಾಗಿದೆ. ನಾಂದೇಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ದೊಡ್ಡ ಆಸ್ಪತ್ರೆ ಇದಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಇರುವ ಸೌಲಭ್ಯಗಳು ಸಾಕಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು..ನಾಂದೇಡ್ನ ಸರ್ಕಾರ ಆಸ್ಪತ್ರೆಯಲ್ಲಿ ಭಾನುವಾರದಿಂದ ಸೋಮವಾರದೊಳಗೆ 24 ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಹನ್ನೆರಡು ಹಸುಗೂಸುಗಳು ಸೇರಿದಂತೆ 24 ಮಂದಿ ಸಾವಿಗೀಡಾಗಿದ್ದಾರೆ. ವೈದ್ಯರು ಮತ್ತು ಆಸ್ಪತ್ರೆಯ ಕೊರತೆಯಿಂದಾಗಿ ಈ ದುರಂತ ಸಂಭವಿಸಿದೆ. 12 ರೋಗಿಗಳು ವಿವಿಧ ಕಾಯಿಲೆ ಮತ್ತು ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಡೀನ್ ಶ್ಯಾಮ್ ರಾವ್ ವಾಕೋಡೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ, ಸರ್ಕಾರ ಕೂಡಲೇ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ಇನ್ನೂ 70 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ: ಈ ವಿಚಾರ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿವೆ. ಮೂರು ಇಂಜಿನ್ಗಳು (ಬಿಜೆಪಿ, ಏಕನಾಥ್ ಶಿಂಧೆ- ಶಿವಸೇನೆ, ಎನ್ಸಿಪಿ -ಅಜಿತ್ ಬಣ) ಈ ಸಾವುಗಳಿಗೆ ಹೊಣೆಯಾಗಿವೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲಾಗದೇ ಜನರ ಜೀವದ ಜೊತೆಗೆ ಸರ್ಕಾರ ಆಟವಾಡುತ್ತಿದೆ ಎಂದು ಆರೋಪಿಸಿವೆ.
ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೋಗಿಗಳು ದೂರುತ್ತಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಚಿವರ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಿ, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ಆರೋಗ್ಯ ಸಚಿವರ ರಾಜೀನಾಮೆ ಆಗ್ರಹ : ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿದಂತೆ 24 ಮಂದಿ ಸಾವನ್ನಪ್ಪಿರುವ ಘಟನೆಯನ್ನು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ತೀವ್ರವಾಗಿ ಖಂಡಿಸಿದ್ದಾರೆ. ಈ ಸಾವುಗಳು ಖಂಡಿತವಾಗಿಯೂ ಕಾಕತಾಳೀಯವಲ್ಲ. ಈ ಬಗ್ಗೆ ಸಮಗ್ರ ತನಿಖೆಗೆ ನಡೆಯಬೇಕು. ಈ ಹಿಂದೆ ಥಾಣೆ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ 17 ಜೀವಗಳು ಬಲಿಯಾಗಿದ್ದವು. ಈ ಬಾರಿ 24 ಜನರು ಸಾವಿಗೀಡಾಗಿದ್ದಾರೆ. ಸರ್ಕಾರ ತನ್ನ ದೋಷಗಳನ್ನು ಮುಚ್ಚಿಡಲು ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಆರೋಪಿಸಿದರು.