ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರು ಕೇವಲ 3 ಮಂದಿ ಮಾತ್ರ ಎಂದು ಜಿಲ್ಲಾಡಳಿತ ಹೇಳಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಈ ಕುರಿತು ತನಿಖೆ ನಡೆಯಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈದ್ಯರು ಕೊಟ್ಟ ಮಾಹಿತಿ ಪ್ರಕಾರ ನಿನ್ನೆ ಬೆಳಗ್ಗೆ 7 ರಿಂದ ಮಧ್ಯರಾತ್ರಿ 12 ರವರೆಗೆ ಕೋವಿಡ್ನಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ 14 -16 ದಿನಗಳಿಂದ ಕೊರೊನಾ ತೀವ್ರವಾದ ಮೇಲೆ ಆಸ್ಪತ್ರೆಗೆ ಬಂದಿದ್ದು, ಕೋವಿಡ್ನ ಸಹಜ ಖಾಯಿಲೆಯಿಂದ ತೀರ್ಕೊಂಡಿದ್ದಾರೆ ಎಂದರು.
ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 3 ರವರೆಗೆ 3 ಜನ ಅಸುನೀಗಿದ್ದಾರೆ. ಮುಂಜಾನೆ 3 ರಿಂದ ಬೆಳಗ್ಗೆ 7 ಗಂಟೆವರೆಗೆ 7 ರೋಗಿಗಳು ಅಸುನೀಗಿದ್ದಾರೆ. 24 ಗಂಟೆಯಲ್ಲಿ 23 ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾಮಗೆರೆಯಲ್ಲಿ ಒಬ್ಬರು ತೀರ್ಕೊಂಡಿದ್ದಾರೆ. ಆಕ್ಸಿಜನ್ನಿಂದ ತೀರಿಕೊಂಡವರು ಜಿಲ್ಲಾಡಳಿತದ ಪ್ರಕಾರ 3 ರೋಗಿಗಳು ಮಾತ್ರ. ಇದು ಪ್ರಾಥಮಿಕವಾಗಿ ವೈದ್ಯರು, ಜಿಲ್ಲಾಡಳಿತ ಕೊಟ್ಟಿರುವ ಮಾಹಿತಿ ಎಂದು ಹೇಳಿದರು.
ಚಾಮರಾಜಗನರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 24 ಜನ ಕೋವಿಡ್ಗೆ ದುರ್ಮರಣ ಆಗಿರುವುದು ನೋವು ತಂದಿದೆ. ಕುಟುಂಬದ ಜನರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಕುಟುಂಬದವರಿಗೆ ಸಾಂತ್ವನದ ಜೊತೆಗೆ ಸರ್ಕಾರದ ಸಹಕಾರವೂ ಇದೆ. ಸಿಎಂ ಕೂಡ ಘಟನೆಯ ಬಗ್ಗೆ ಫೋನ್ನಲ್ಲಿ ಮಾತಾಡಿ ಸಮಗ್ರ ತನಿಖೆ ಮಾಡೋಣ ಎಂದು ಹೇಳಿದ್ದಾರೆ ಎಂದರು.