ನವದೆಹಲಿ: ಆರಂಭವಾಗಲಿರುವ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ 19ನೇ ಆವೃತ್ತಿಯಲ್ಲಿ ಭಾರತ ಹೆಚ್ಚು ಪದಕದ ನಿರೀಕ್ಷೆಯೊಂದಿಗೆ ಭಾಗವಹಿಸುತ್ತಿದೆ.2018ರ ಆವೃತ್ತಿಯಲ್ಲಿ ಉತ್ತಮ ರೆಕಾರ್ಡ್ಗಳನ್ನು ಮಾಡಿರುವ ಅಥ್ಲೀಟ್ಗಳು ಈ ವರ್ಷ ಇನ್ನಷ್ಟೂ ಪದಕವನ್ನು ಭಾರತಕ್ಕೆ ಗೆದ್ದು ತೆರಲಿದ್ದಾರೆ. ಏಷ್ಯನ್ ಗೇಮ್ಸ್‌ನ 19ನೇ ಸೀಸನ್ ಸೆಪ್ಟೆಂಬರ್ 23 ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ಪ್ರಾರಂಭವಾಗಲಿದ್ದು, ಅಕ್ಟೋಬರ್ 8 ರ ವರೆಗೆ ನಡೆಯಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಆರಂಭವಾಗುತ್ತಿದ್ದು, 2018ರ ರೀತಿಯಲ್ಲಿ ಭಾರತದಿಂದ ಅದ್ಭುತ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ.
ರುತುರಾಜ್ ಗಾಯಕ್ವಾಡ್ ಮತ್ತು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಕಾಂಟಿನೆಂಟಲ್ ಮಟ್ಟದ ಈವೆಂಟ್‌ಗೆ ಪಾದಾರ್ಪಣೆ ಮಾಡಲಿವೆ. ಮಹಿಳಾ ತಂಡವು ಸೆಪ್ಟೆಂಬರ್ 21 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ ಮತ್ತು ಫೈನಲ್ ಸೆಪ್ಟೆಂಬರ್ 25 ರಂದು ನಡೆಯಲಿದೆ. ಇದರ ನಂತರ, ಪುರುಷರ ಕ್ರಿಕೆಟ್ ತಂಡಗಳು ಸೆಪ್ಟೆಂಬರ್ 27 ರಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತವೆ ಮತ್ತು ಪ್ರಶಸ್ತಿ ಹಣಾಹಣಿಯು ಅಕ್ಟೋಬರ್ 7 ರಂದು ನಡೆಯಲಿದೆ. ಅಕ್ಟೋಬರ್ 3 ರಂದು ಮೊದಲ ಪಂದ್ಯವನ್ನು ಭಾರತೀಯ ಪುರುಷರ ತಂಡವು ಆಡಲಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಕುಸ್ತಿಪಟು ಬಜರಂಗ್ ಪುನಿಯಾ ಮತ್ತು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೂಡ ಆಡುತ್ತಿದ್ದಾರೆ. ಬ್ಯಾಡ್ಮಿಂಟನ್ ಸ್ಪರ್ಧೆಯು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದ್ದು, ಸಿಂಧು 19 ಸದಸ್ಯರ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಗಳಾದ ಲಕ್ಷ್ಯ ಸೇನ್ ಮತ್ತು ಕಳೆದ ಬಾರಿ ನಡೆದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಎಚ್‌ಎಸ್ ಪ್ರಣಯ್ ಭಾಗವಹಿಸಲಿದ್ದಾರೆ.
19ನೇ ಆವೃತ್ತಿಯ 655 ಸದಸ್ಯರ ಬಲಿಷ್ಠ ಭಾರತೀಯ ತಂಡವು 61 ತಂಡಗಳು 41 ವಿಭಾಗಗಳಲ್ಲಿ ಸ್ಪರ್ಧಿಸಲಿವೆ. 481 ಚಿನ್ನದ ಪದಕಕ್ಕೆ 56 ಸ್ಥಳಗಳಲ್ಲಿ ಸ್ಫರ್ದೆಗಳು ಆಯೋಜನೆಗೊಂಡಿದೆ. ಸೆಪ್ಟೆಂಬರ್ 23 ರಂದು ಆಟಗಳು ಅಧಿಕೃತವಾಗಿ ಪ್ರಾರಂಭವಾಗಿದ್ದರೂ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್ ನಂತಹ ಕ್ರೀಡೆಗಳು ಸೆಪ್ಟೆಂಬರ್ 19 ರಿಂದ ಸ್ಟಾರ್ಟ್ ಆಗಲಿವೆ.
ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತೆ ಮಾಜಿ ವಿಶ್ವ ಚಾಂಪಿಯನ್ ಚಾನು ಸೆಪ್ಟೆಂಬರ್ 30 ರಂದು ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಏಷ್ಯಾಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಟೋಕಿಯೊ 2020 ರ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ, ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಹಾಲಿ ಚಾಂಪಿಯನ್ ಅಕ್ಟೋಬರ್ 6 ರಂದು ಆಡಲಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್ ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಪಂದ್ಯವಾಗಿದೆ. ಎರಡು ಬಾರಿಯ ಮತ್ತು ಪ್ರಸ್ತುತ ವಿಶ್ವ ಚಾಂಪಿಯನ್ ನಿಖತ್ ಜರೀನ್ ಸೆಪ್ಟೆಂಬರ್ 24 ರಿಂದ ಮಹಿಳೆಯರ 50 ಕೆಜಿಯಲ್ಲಿ ಮತ್ತು ಸೆಪ್ಟೆಂಬರ್ 26 ರಿಂದ ಲೊವ್ಲಿನಾ ಮಹಿಳೆಯರ 75 ಕೆಜಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬಾಕ್ಸಿಂಗ್ ಸ್ಪರ್ಧೆಗಳು ಅಕ್ಟೋಬರ್ 5 ರಂದು ಕೊನೆಗೊಳ್ಳಲಿವೆ. ಹಾಕಿ ಸ್ಪರ್ಧೆಯು ಪ್ಯಾರಿಸ್ 2024 ರ ಒಲಿಂಪಿಕ್ಸ್ ಅರ್ಹತಾ ಪಂದ್ಯವಾಗಿದೆ, ಹೀಗಾಗಿ ಭಾರತೀಯ ಹಾಕಿ ತಂಡ ಚಿನ್ನದ ಬೇಟೆಗೆ ಗುರಿಯನ್ನು ಇಟ್ಟಿದೆ. ಪುರುಷರ ಹಾಕಿ ಸೆಪ್ಟೆಂಬರ್ 24 ರಿಂದ, ಮಹಿಳಾ ಹಾಕಿ ಸೆಪ್ಟೆಂಬರ್ 25 ರಿಂದ ಆಡಲಿದೆ.
ಹರ್ಡಲರ್ ಜ್ಯೋತಿ ಯರಾರ್ಜಿ, ಸ್ಟೀಪಲ್‌ಚೇಸ್ ರೇಸರ್ ಅವಿನಾಶ್ ಸೇಬಳೆ, ಲಾಂಗ್ ಜಂಪರ್ ಮುರಳಿ ಶ್ರೀಶಂಕರ್, ಮಾಜಿ ಏಷ್ಯನ್ ಚಾಂಪಿಯನ್ ಬಾಕ್ಸರ್ ಶಿವ ಥಾಪಾ, ಭಾರತದ ಟೇಬಲ್ ಟೆನ್ನಿಸ್ ತಾರೆಗಳಾದ ಮನಿಕಾ ಬಾತ್ರಾ, ಶರತ್ ಕಮಲ್, ಚೆಸ್ನಲ್ಲಿ ವಿಶ್ವಕಪ್ ರನ್ನರ್ ಅಪ್ ಆರ್ ಪ್ರಗ್ನಾನಂದ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
2022ರಲ್ಲಿ ಏಷ್ಯನ್ ಗೇಮ್ಸ್ ನಡೆಯ ಬೇಕಿತ್ತು ಆದರೆ, ಕೋವಿಡ್ ಕಾರಣಕ್ಕಾಗಿ ಕ್ರೀಡೆಯನ್ನು ಮುಂದೂಡಿದ ಕಾರಣ ಈ ವರ್ಷ ನಡೆಯುತ್ತಿದೆ. 2018 ರಲ್ಲಿ ಭಾರತ 70 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಈ ಬಾರಿ ನಿರೀಕ್ಷೆಗಳು ಹೆಚ್ಚಾಗಿದೆ.
ಭಾರತವು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ 68 ಆಟಗಾರರ ತಂಡ ಕಣಕ್ಕಿಳಿಯುತ್ತಿದೆ. ಈ ಕ್ರೀಡೆಗಳಲ್ಲಿ ಭಾರತ ಹೆಚ್ಚು ಪದಕದ ನಿರೀಕ್ಷೆಯನ್ನು ಇಟ್ಟಿದೆ. ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರು 2018 ರಲ್ಲಿ ಜಕಾರ್ತಾದಲ್ಲಿ ಚಿನ್ನ ಗೆದ್ದ ತಮ್ಮ ನಾಗಾಲೋಟವನ್ನು ಮುಂದುವರಿಸುವ ಗುರಿ ಹೊಂದಿದ್ದಾರೆ. ಅಥ್ಲೆಟಿಕ್ಸ್ ಸ್ಪರ್ಧೆಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದ್ದು, ಪುರುಷರ ಜಾವೆಲಿನ್ ಥ್ರೋ ಫೈನಲ್ ಅಕ್ಟೋಬರ್ 4 ರಂದು ನಡೆಯಲಿದೆ. ಭಾರತದ ‘ಗೋಲ್ಡನ್ ಬಾಯ್’ ನೀರಜ್ ಈ ಇವೆಂಟ್ನ ದೊಡ್ಡ ಆಕರ್ಷಣೆ.