ಅಯೋಧ್ಯೆಯ ರಸ್ತೆಗಳ ನಾಮಫಲಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಸಿರಿ ‘ಕನ್ನಡ’: 22 ಭಾರತೀಯ ಭಾಷೆ ಹಾಗೂ 6 ವಿದೇಶೀ ಭಾಷೆಗಳಿಗೆ ಸ್ಥಾನ

ಲಖನೌ: ಭಾರತೀಯ ಮತ್ತು ಸಾಗರೋತ್ತರ ಪ್ರವಾಸಿಗರ ಅನುಕೂಲಕ್ಕಾಗಿ ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ನಾಮ ಫಲಕಗಳನ್ನು ಹಾಕಲಾಗುತ್ತಿದ್ದು ಒಟ್ಟು 28 ಭಾಷೆಗಳಲ್ಲಿ ಬರೆಯಲಾಗಿದೆ. ಇದರಲ್ಲಿ 22 ಭಾರತೀಯ ಭಾಷೆಗಳಾದರೆ ಆರು ವಿದೇಶಿ ಭಾಷೆಗಳಿವೆ.

ಸಂಕೇತಗಳು ಭಾರತೀಯ ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ 22 ಭಾರತೀಯ ಭಾಷೆಗಳಲ್ಲಿ ಮತ್ತು ಯುಎನ್ (ಯುನೈಟೆಡ್ ನೇಷನ್ಸ್) ನ ಆರು ಅಧಿಕೃತ ಭಾಷೆಗಳಲ್ಲಿವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಅರೇಬಿಕ್, ಚೈನೀಸ್, ಫ್ರೆಂಚ್, ಇಂಗ್ಲಿಷ್, ರಷ್ಯನ್ ಮತ್ತು ಸ್ಪ್ಯಾನಿಷ್ ವಿದೇಶೀ ಭಾಷೆಗಳು ಮತ್ತು ಹಿಂದಿ, ಉರ್ದು, ಅಸ್ಸಾಮಿ, ಒರಿಯಾ, ಕನ್ನಡ, ಕಾಶ್ಮೀರಿ, ಕೊಂಕಣಿ, ಗುಜರಾತಿ, ಡೋಗ್ರಿ, ತಮಿಳು, ತೆಲುಗು, ನೇಪಾಳಿ, ಪಂಜಾಬಿ, ಬಾಂಗ್ಲಾ, ಬೋಡೋ, ಮಣಿಪುರಿ, ಮರಾಠಿ, ಮಲಯಾಳಂ, ಮೈಥಿಲಿ, ಸಂತಾಲಿ, ಸಂಸ್ಕೃತ ಮತ್ತು ಸಿಂಧಿ ಭಾಷೆಗಳು ಸೇರಿವೆ.

ಹನುಮಾನ್ ಗರ್ಹಿ, ಕನಕ್ ಭವನ, ರಾಮ್ ಕಿ ಪೈಡಿ, ಅಯೋಧ್ಯಾ ಧಾಮ್ ಜಂಕ್ಷನ್, ತೇಧಿ ಬಜಾರ್ ಮತ್ತು ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಇತರ ಗೊತ್ತುಪಡಿಸಿದ ಸ್ಥಳಗಳಲ್ಲಿ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ನಾಮಫಲಕ ಸ್ಥಾಪನೆಯ ಕೆಲಸ ಜ.22 ರೊಳಗೆ ಮುಗಿಯಲಿದೆ ಎಂದು ಹೇಳಿಕೆ ತಿಳಿಸಿದೆ.