ಚಿತ್ತಾಪುರ: ದ.ಕ. ಜಿಲ್ಲೆಯ ಸುರತ್ಕಲ್ ಸಮೀಪ ಇರುವ ಶ್ರೀ ಕ್ಷೇತ್ರ ಚಿತ್ರಾಪುರ ಒಂದು ದಿವ್ಯ ಕ್ಷೇತ್ರ. ಜಗದ್ಗುರು ಶ್ರೀ ಮಧ್ವಾಚಾರ್ಯ ಪರಂಪರೆಯ ಶ್ರೀ ಪೇಜಾವರ ಅಧೋಕ್ಷಜ ಮಠದ ಕವಲು ಮಠವೂ ಇದಾಗಿದೆ.
ಶ್ರೀ ಪೇಜಾವರ ಮಠದ ಯತಿ ಪರಂಪರೆಯ ಪ್ರಾತಃಸ್ಮರಣೀಯರಾದ ಕೀರ್ತಿಶೇಷ ಶ್ರೀ ವಿಜಯಧ್ವಜತೀರ್ಥರು ತಮಗೆ ಒಲಿದ ದುರ್ಗೆಯನ್ನು ಚಿತ್ರಾಪುರದಲ್ಲಿ ಪ್ರತಿಷ್ಠಾಪಿಸಿ ಸುಂದರ ದೇವಾಲಯ ನಿರ್ಮಿಸಿದರು.
ಅದರ ನಿರ್ವಹಣೆಗಾಗಿ ಅಲ್ಲೇ ಸಮೀಪದಲ್ಲೇ ಒಂದು ಮಠವನ್ನು ಸ್ಥಾಪಿಸಿ ಓರ್ವ ಯತಿಗಳನ್ನು ನೇಮಿಸಿದರು. ಅದೇ ಪರಂಪರೆಯಾಯಿತು. ಆ ಯತಿ ಪರಂಪರೆಯ ಈಗಿನ ಉತ್ತರಾಧಿಕಾರಿಗಳೇ ವಿದ್ಯೇಂದ್ರತೀರ್ಥ ಶ್ರೀಪಾದರು.
ಮೂಲತಃ ತೀರ್ಥಹಳ್ಳಿಯ ಶ್ರೀಗಳು ಅತ್ಯಂತ ಎಳೆಯ ವಯಸ್ಸಿನಲ್ಲೇ ಶ್ರೀಮಠದ ಹಿಂದಿನ ಯತಿಗಳಾಗಿದ್ದ ಕೀರ್ತಿಶೇಷ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಹಾಗೂ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಶ್ರೀಮಠದ 20ನೇ ಉತ್ತರಾಧಿಕಾರಿಯಾಗಿ ಸಂನ್ಯಾಸ ಸ್ವೀಕರಿಸಿದರು.
ಬಳಿಕ ಶಾಸ್ತ್ರಾಧ್ಯಯನಗಳನ್ನು ಪುತ್ತಿಗೆ ಶ್ರೀಗಳ ಮಾರ್ಗದರ್ಶನದಲ್ಲೇ ಪುತ್ತಿಗೆ ವಿದ್ಯಾಪೀಠದಲ್ಲೇ ನಡೆಸಿದರು. ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ಪಾಠವನ್ನೂ ಕೇಳಿದ್ದು ಮತ್ತು ಅದನ್ನು ಪ್ರಸ್ತುತ ನಾಲ್ಕಾರು ವಿದ್ಯಾರ್ಥಿಗಳಿಗೆ ನಿತ್ಯ ಶ್ರೀ ವಿದ್ಯೇಂದ್ರತೀರ್ಥರೇ ಸ್ವಯಂ ಈ ತಾರುಣ್ಯದಲ್ಲೇ ನಡೆಸುತ್ತಿರುವುದು ಅತ್ಯಂತ ವಿಶೇಷ.
ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಕಾಲಾನಂತರ ಚಿತ್ರಾಪುರ ಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳು, ಅಲ್ಲೇ ಶ್ರೀಮಠದ ಪಟ್ಟದ ದೇವರಾದ ಶ್ರೀ ಕಾಲೀಯಮರ್ದನ ತಾಂಡವ ಕೃಷ್ಣ ದೇವರ ಆರಾಧನೆಯನ್ನು ನಡೆಸಿಕೊಂಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ ಪಡೆಯುತ್ತಿದ್ದಾರೆ.
✍️ ಜಿ. ವಾಸುದೇವ ಭಟ್ ಪೆರಂಪಳ್ಳಿ