ಮಂಗಳೂರು: ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ವಂಚಕರು ವಂಚಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ.
2025ನೇ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರುವ ಲಿಂಕ್ಗಳನ್ನು ಎಪಿಕೆ ಫೈಲ್ಗಳಲ್ಲಿ(APK) ಮೊಬೈಲ್ಗೆ ಕಳುಹಿಸಿ ಮೊಬೈಲ್ನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಮೊಬೈಲ್ ಹ್ಯಾಕ್ ಮಾಡಿದ ಅನಂತರ ಆ ಮೊಬೈಲ್ನಿಂದ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ.
ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಎಪಿಕೆ ಫೈಲ್ಗಳನ್ನು ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ಕೂಡಲೇ ಡಿಲೀಟ್ ಮಾಡಬೇಕು. ಒಂದು ವೇಳೆ ಅಂತಹ ಎಪಿಕೆ ಫೈಲ್ಗಳನ್ನು ಯಾವುದೇ ವಾಟ್ಸ್ ಆ್ಯಪ್ ಗ್ರೂಪ್ಗಳಿಗೆ ಪರಿಚಿತ ವಾಟ್ಸ್ ಆ್ಯಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದರೆ ಅಂತಹ ಗ್ರೂಪ್ನ ಅಡ್ಮಿನ್ಗಳು ಫೈಲ್ಗಳನ್ನು ಡಿಲೀಟ್ ಮಾಡಬೇಕು.
ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದರೆ ಕೂಡಲೇ 1930ಗೆ ಕರೆ ಮಾಡಬೇಕು ಅಥವಾ www.cybercrime.gov.in ನಲ್ಲಿ ದೂರು ಸಲ್ಲಿಸುವಂತೆ ಪೊಲೀಸರು ತಿಳಿಸಿದ್ದಾರೆ.