ಮಂಗಳೂರು: ಮಂಗಳೂರು ಮೂಲದ ಎಂ.ಬಿ.ಎ. ಪದವೀಧರರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಿಯಾಗಿರುವ ತೌಸೀಫ್ ಅಹಮದ್ ಇವರು ಅವರು ಪ್ರಾಣಿಪ್ರಿಯರಾಗಿದ್ದು, ಕಳೆದ 14 ವರ್ಷಗಳಿಂದ ಮಂಗಳೂರು ನಗರದಲ್ಲಿ ಬೀದಿಯ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಮೇ 28ರಂದು ಮುಂಬೈನಲ್ಲಿ ನಡೆದ ಇಂಟರ್’ನ್ಯಾಶನಲ್ ಐಕಾನಿಕ್ ಅವಾರ್ಡ್ಸ್ ಸೀಸನ್ 10 ನಲ್ಲಿ ‘2024ನೇ ಸಾಲಿನ ಇಂಟರ್’ನ್ಯಾಶನಲ್ ಐಕಾನಿಕ್ ಅನಿಮಲ್ ರೆಸ್ಕ್ಯೂ ಹೀರೋ’ ಎಂಬ ಪುರಸ್ಕಾರಕ್ಕೆ ಭಾಜನರಾದರು.
ಪ್ಯಾರವೆಟ್ ತರಬೇತಿ ಪಡೆದ ತೌಸೀಫ್, ತಮ್ಮ ಜೀವನದ ಉದ್ದೇಶವೇ ಪ್ರಾಣಿರಕ್ಷಣೆ ಎಂದು ನಂಬಿದ್ದು, ಇದುವರೆಗೆ 18,000ಕ್ಕೂ ಹೆಚ್ಚು ಪ್ರಾಣಿಗಳನ್ನು, 6,000ಕ್ಕೂ ಹೆಚ್ಚು ಹಾವುಗಳು ಮತ್ತು ಇತರ ಕಾಡುಪ್ರಾಣಿಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಪುನರ್ವಸತಿಗೊಳಿಸಿದ್ದಾರೆ. ಎನ್ಜಿಒ ತಂಡ ಅಥವಾ ಆಂಬುಲೆನ್ಸ್ ಇಲ್ಲದಿದ್ದರೂ, ಒಬ್ಬಂಟಿಯಾಗಿ ಈ ಮೌನ ಪ್ರಾಣಿಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ, ತೌಸೀಫ್ ಬೀದಿಯಲ್ಲಿ ಬದುಕಲು ಅಸಮರ್ಥ ಪ್ರಾಣಿಗಳಿಗೆ ಆಶ್ರಯ ಕಟ್ಟುವ ಉದ್ದೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಸಮುದಾಯದಲ್ಲಿ ತಮ್ಮ ಜೀವನವನ್ನು ನಿರಂತರವಾಗಿ ಈ ನೈತಿಕ ಕಾರ್ಯಗಳಿಗೆ ಮೀಸಲಿಟ್ಟ ಇಂತಹ ವ್ಯಕ್ತಿಗಳ ಅಗತ್ಯವಿದೆ.