2023ರ ವಿಕಿಪೀಡಿಯಾದ ಟಾಪ್​ 25 ಲೇಖನಗಳ ಪಟ್ಟಿ ಬಿಡುಗಡೆ: ಕ್ರಿಕೆಟ್​, ಬಾಲಿವುಡ್​ ಸಿನಿಮಾ, ಭಾರತದ ಬಗ್ಗೆ ಹೆಚ್ಚು ಸರ್ಚ್​​

ಸ್ಯಾನ್ ಫ್ರಾನ್ಸಿಸ್ಕೋ: 2023 ರಲ್ಲಿ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಮಂಗಳವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲನೇ ಸ್ಥಾನ ಚಾಟ್‌ಜಿಪಿಟಿ (AI) ಪಡೆದುಕೊಂಡರೆ, 2ನೇಯದು ಸಾವುಗಳ ಕುರಿತು ಮತ್ತು ಕ್ರಿಕೆಟ್‌ ಕ್ರೇಜ್​ ಮೂರನೇ ಸ್ಥಾನದಲ್ಲಿದೆ. ಹಾಗೇ ಸಿನಿಮಾ ಕುರಿತು ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಹಾಲಿವುಡ್​ನ ಬಾರ್ಬಿಯಿಂದ ಹಿಡಿದು ಬಾಲಿವುಡ್‌ವರೆಗೆ ಮತ್ತು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವಲ್ಲಿ ಜನರು ಸಕ್ರಿಯರಾಗಿದ್ದಾರೆ ಎಂಬ ಅಂಶ ಈ ಪಟ್ಟಿಯಿಂದ ಹೊರಬಿದ್ದಿದೆ.ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ 25 ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಬಿಡುಗಡೆ ಮಾಡಿದೆ.

ವಿಕಿಮೀಡಿಯಾ ಫೌಂಡೇಶನ್ ಪ್ರತಿ ವರ್ಷದ ಕೊನೆಯಲ್ಲಿ ವಿಕಿಪೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹುಡುಕಾಟದ ಪಟ್ಟಿಗಳನ್ನು ಪ್ರಕಟಿಸುತ್ತದೆ. ಅದೇ ರೀತಿ ಈ ಬಾರಿಯ ಲಿಸ್ಟ್​ ಅನ್ನು ನಿನ್ನೆ ಬಿಡುಗಡೆ ಮಾಡಿದ್ದು, ಭಾರತೀಯ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳ ವೀಕ್ಷಣೆ ಅಧಿಕವಾಗಿದ್ದು, ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ. ಒಟ್ಟು ಟಾಪ್ 25 ಲೇಖನಗಳಲ್ಲಿ ಸುಮಾರು 7 ಲೇಖನಗಳು ಭಾರತಕ್ಕೆ ಸಂಬಂಧಿಸಿದ್ದವಾಗಿವೆ.

2023 ರ ಅಗ್ರ 5 ಲೇಖನಗಳು:

1)ಚಾಟ್​ ಜಿಪಿಟಿ-49,490,406 ಪುಟವೀಕ್ಷಣೆ.

2)2023 ರಲ್ಲಿನ ಸಾವುಗಳು-42,666,860 ಪುಟವೀಕ್ಷಣೆ.

3)2023 ಕ್ರಿಕೆಟ್ ವಿಶ್ವಕಪ್-38,171,653 ಹುಡುಕಾಟ.

4)ಇಂಡಿಯನ್ ಪ್ರೀಮಿಯರ್ ಲೀಗ್-32,012,810 ವೀಕ್ಷಣೆ.

5)ಓಪನ್‌ಹೈಮರ್ (ಹಾಲಿವುಡ್​ ಚಲನಚಿತ್ರ), 28,348,248 ಪುಟವೀಕ್ಷಣೆ.

ಕುತೂಹಲಕಾರಿ ವಿಷಯ ಎಂದರೆ, ‘2023 ಕ್ರಿಕೆಟ್ ವಿಶ್ವಕಪ್’ ಪುಟವು ಅದರ ಹಿಂದಿನ ಆವೃತ್ತಿಯಾದ ‘2019ರ ಕ್ರಿಕೆಟ್ ವಿಶ್ವಕಪ್​ಗೆ ಹೋಲಿಸಿದರೆ ಈ ವರ್ಷ ಶೇಕಡಾ 304 ರಷ್ಟು ಹೆಚ್ಚಿನ ಆಸಕ್ತಿ ಪಡೆದುಕೊಂಡಿದೆ. ಇನ್ನು ವಿಶ್ವಕಪ್​ನ ಪಂದ್ಯಾವಳಿಯ ಫೈನಲ್ ದಿನದಂದು 1.25 ಮಿಲಿಯನ್ ವೀಕ್ಷಣೆಗಳಾಗಿವೆ. ಹಾಗೇ 2023 ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ನೀಡಿದ್ದು ಈ ಕುರಿತು ಇಂಗ್ಲಿಷ್ ವಿಕಿಪೀಡಿಯಾದಲ್ಲಿ 10 ಮಿಲಿಯನ್‌ಗಿಂತ ಹೆಚ್ಚಿನ ಪುಟಗಳ ವೀಕ್ಷಣೆಗಳಾಗಿವೆ.

ಕೇವಲ ಕ್ರಿಕೆಟ್​ ಅಲ್ಲದೇ ಪಟ್ಟಿಯಲ್ಲಿ ಈ ವರ್ಷದ ಎರಡು ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಟಾಪ್ 25 ರಲ್ಲಿ ಪ್ರಮುಖ ಹುಡುಕಾಟವಾಗಿ ಹೊರಬಿದ್ದಿದೆ. ಈ ಮೂಲಕ ಬಾಲಿವುಡ್​ ತನ್ನದೇ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಿಂಗ್​ ಖಾನ್​ ಶಾರುಖ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್​’ ಎರಡೂ ಹಿಂದಿ ಭಾಷೆಯ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ್ದು. ವಿಕಿಮೀಡಿಯಾ ಪಟ್ಟಿಯಲ್ಲಿ ಎಂಟನೇ ಮತ್ತು ಹತ್ತನೇ ಸ್ಥಾನದಲ್ಲಿದೆ. ಈ ಚಿತ್ರದ ಹುಡುಕಾಟದ ವೀಕ್ಷಣೆ ಒಟ್ಟು 41.7 ಮಿಲಿಯನ್ ಆಗಿದೆ. ಹಾಗೂ ಹಾಲಿವುಡ್‌ನ ‘ಒಪೆನ್‌ಹೈಮರ್’ (ಐದನೇ ಸ್ಥಾನ) ಮತ್ತು ‘ಜೆ ರಾಬರ್ಟ್ಒಪೆನ್‌ಹೈಮರ್'(ಏಳನೇ ಸ್ಥಾನ) ಲೇಖನವು ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದೆ. ಮತ್ತು ಹಾಲಿವುಡ್​ನ ಮತ್ತೆರಡು ಚಿತ್ರ ‘ಬಾರ್ಬಿ’ ಮತ್ತು ‘ಅವತಾರ್: ದಿ ವೇ ಆಫ್ ವಾಟರ್’ ಕ್ರಮವಾಗಿ 13 ಮತ್ತು 20ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.

ಕ್ರಿಕೆಟ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಈ ಬಾರಿಯ ಹೆಚ್ಚು ನಿರೀಕ್ಷಿತ 2023 ಕ್ರಿಕೆಟ್ ವಿಶ್ವಕಪ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಸ್ಥಾನದಲ್ಲಿದೆ. ‘ಕ್ರಿಕೆಟ್ ವರ್ಲ್ಡ್ ಕಪ್ 2023’ ಮತ್ತು ‘ಇಂಡಿಯನ್ ಪ್ರೀಮಿಯರ್ ಲೀಗ್’ ಲೇಖನಗಳ ಜೊತೆಗೆ ಅಗ್ರ 5 ವಿಕಿಪೀಡಿಯ ಲೇಖನಗಳು ಒಟ್ಟಾರೆಯಾಗಿ 116.8 ಮಿಲಿಯನ್ ಪುಟ ವೀಕ್ಷಣೆಗಳನ್ನು ಪಡೆದಿವೆ. 2019 ರ ಕ್ರಿಕೆಟ್ ವಿಶ್ವಕಪ್​ಗೆ ಹೋಲಿಸಿದರೆ ಈ ವರ್ಷ ಕ್ರಿಕೆಟ್ ಮೇಲಿನ ಆಸಕ್ತಿ ಶೇಕಡಾ 304 ರಷ್ಟು ಹೆಚ್ಚಿದೆ. ​

“ಪ್ರತಿ ವಿಕಿಪೀಡಿಯ ಲೇಖನವನ್ನು 2,65,000 ಕ್ಕೂ ಹೆಚ್ಚು ಸ್ವಯಂಸೇವಕರ ಜಾಗತಿಕ ಸಮುದಾಯದಿಂದ ಸಂಗ್ರಹಿಸಿ ರಚಿಸಲಾಗುತ್ತದೆ. ಇಂಗ್ಲಿಷ್ ವಿಕಿಪೀಡಿಯಾ ಈ ವರ್ಷವೊಂದರಲ್ಲೇ 84 ಬಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೇ ಈ ವರ್ಷಾಂತ್ಯದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ 25 ಲೇಖನಗಳು 2023 ರಲ್ಲಿ 540.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿವೆ.ಮುಖ್ಯವಾಗಿ ‘ಭಾರತ’ದ ಕುರಿತಾದ ವಿಕಿಪೀಡಿಯ ಲೇಖನ ಹುಡುಕಾಟ 21ನೇ ಸ್ಥಾನದಲ್ಲಿದೆ. ಸುಮಾರು 14 ಮಿಲಿಯನ್ ಪುಟ ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ ಕಾರಣ ಈ ವರ್ಷ ಭಾರತದಲ್ಲಿ ಹಲವಾರು ಸಕಾರಾತ್ಮಕ ಜಾಗತಿಕ ಬೆಳವಣಿಗೆಗಳು. ಭಾರತದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತಲುಪಿಸಿದ ದೇಶವಾಗಿದೆ. ಹಾಗೇ RRR ಸಿನಿಮಾದ ‘ನಾಟು ನಾಟು’ ಹಾಡು ‘ಅತ್ಯುತ್ತಮ ಮೂಲ ಗೀತೆ’ಯಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.