ಸ್ಯಾನ್ ಫ್ರಾನ್ಸಿಸ್ಕೋ: 2023 ರಲ್ಲಿ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಮಂಗಳವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲನೇ ಸ್ಥಾನ ಚಾಟ್ಜಿಪಿಟಿ (AI) ಪಡೆದುಕೊಂಡರೆ, 2ನೇಯದು ಸಾವುಗಳ ಕುರಿತು ಮತ್ತು ಕ್ರಿಕೆಟ್ ಕ್ರೇಜ್ ಮೂರನೇ ಸ್ಥಾನದಲ್ಲಿದೆ. ಹಾಗೇ ಸಿನಿಮಾ ಕುರಿತು ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಹಾಲಿವುಡ್ನ ಬಾರ್ಬಿಯಿಂದ ಹಿಡಿದು ಬಾಲಿವುಡ್ವರೆಗೆ ಮತ್ತು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವಲ್ಲಿ ಜನರು ಸಕ್ರಿಯರಾಗಿದ್ದಾರೆ ಎಂಬ ಅಂಶ ಈ ಪಟ್ಟಿಯಿಂದ ಹೊರಬಿದ್ದಿದೆ.ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ 25 ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಬಿಡುಗಡೆ ಮಾಡಿದೆ.
ವಿಕಿಮೀಡಿಯಾ ಫೌಂಡೇಶನ್ ಪ್ರತಿ ವರ್ಷದ ಕೊನೆಯಲ್ಲಿ ವಿಕಿಪೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹುಡುಕಾಟದ ಪಟ್ಟಿಗಳನ್ನು ಪ್ರಕಟಿಸುತ್ತದೆ. ಅದೇ ರೀತಿ ಈ ಬಾರಿಯ ಲಿಸ್ಟ್ ಅನ್ನು ನಿನ್ನೆ ಬಿಡುಗಡೆ ಮಾಡಿದ್ದು, ಭಾರತೀಯ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳ ವೀಕ್ಷಣೆ ಅಧಿಕವಾಗಿದ್ದು, ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ. ಒಟ್ಟು ಟಾಪ್ 25 ಲೇಖನಗಳಲ್ಲಿ ಸುಮಾರು 7 ಲೇಖನಗಳು ಭಾರತಕ್ಕೆ ಸಂಬಂಧಿಸಿದ್ದವಾಗಿವೆ.
2023 ರ ಅಗ್ರ 5 ಲೇಖನಗಳು:
1)ಚಾಟ್ ಜಿಪಿಟಿ-49,490,406 ಪುಟವೀಕ್ಷಣೆ.
2)2023 ರಲ್ಲಿನ ಸಾವುಗಳು-42,666,860 ಪುಟವೀಕ್ಷಣೆ.
3)2023 ಕ್ರಿಕೆಟ್ ವಿಶ್ವಕಪ್-38,171,653 ಹುಡುಕಾಟ.
4)ಇಂಡಿಯನ್ ಪ್ರೀಮಿಯರ್ ಲೀಗ್-32,012,810 ವೀಕ್ಷಣೆ.
5)ಓಪನ್ಹೈಮರ್ (ಹಾಲಿವುಡ್ ಚಲನಚಿತ್ರ), 28,348,248 ಪುಟವೀಕ್ಷಣೆ.
ಕುತೂಹಲಕಾರಿ ವಿಷಯ ಎಂದರೆ, ‘2023 ಕ್ರಿಕೆಟ್ ವಿಶ್ವಕಪ್’ ಪುಟವು ಅದರ ಹಿಂದಿನ ಆವೃತ್ತಿಯಾದ ‘2019ರ ಕ್ರಿಕೆಟ್ ವಿಶ್ವಕಪ್ಗೆ ಹೋಲಿಸಿದರೆ ಈ ವರ್ಷ ಶೇಕಡಾ 304 ರಷ್ಟು ಹೆಚ್ಚಿನ ಆಸಕ್ತಿ ಪಡೆದುಕೊಂಡಿದೆ. ಇನ್ನು ವಿಶ್ವಕಪ್ನ ಪಂದ್ಯಾವಳಿಯ ಫೈನಲ್ ದಿನದಂದು 1.25 ಮಿಲಿಯನ್ ವೀಕ್ಷಣೆಗಳಾಗಿವೆ. ಹಾಗೇ 2023 ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ನೀಡಿದ್ದು ಈ ಕುರಿತು ಇಂಗ್ಲಿಷ್ ವಿಕಿಪೀಡಿಯಾದಲ್ಲಿ 10 ಮಿಲಿಯನ್ಗಿಂತ ಹೆಚ್ಚಿನ ಪುಟಗಳ ವೀಕ್ಷಣೆಗಳಾಗಿವೆ.
ಕೇವಲ ಕ್ರಿಕೆಟ್ ಅಲ್ಲದೇ ಪಟ್ಟಿಯಲ್ಲಿ ಈ ವರ್ಷದ ಎರಡು ಬ್ಲಾಕ್ಬಸ್ಟರ್ ಚಲನಚಿತ್ರಗಳು ಟಾಪ್ 25 ರಲ್ಲಿ ಪ್ರಮುಖ ಹುಡುಕಾಟವಾಗಿ ಹೊರಬಿದ್ದಿದೆ. ಈ ಮೂಲಕ ಬಾಲಿವುಡ್ ತನ್ನದೇ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್’ ಎರಡೂ ಹಿಂದಿ ಭಾಷೆಯ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ್ದು. ವಿಕಿಮೀಡಿಯಾ ಪಟ್ಟಿಯಲ್ಲಿ ಎಂಟನೇ ಮತ್ತು ಹತ್ತನೇ ಸ್ಥಾನದಲ್ಲಿದೆ. ಈ ಚಿತ್ರದ ಹುಡುಕಾಟದ ವೀಕ್ಷಣೆ ಒಟ್ಟು 41.7 ಮಿಲಿಯನ್ ಆಗಿದೆ. ಹಾಗೂ ಹಾಲಿವುಡ್ನ ‘ಒಪೆನ್ಹೈಮರ್’ (ಐದನೇ ಸ್ಥಾನ) ಮತ್ತು ‘ಜೆ ರಾಬರ್ಟ್ಒಪೆನ್ಹೈಮರ್'(ಏಳನೇ ಸ್ಥಾನ) ಲೇಖನವು ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದೆ. ಮತ್ತು ಹಾಲಿವುಡ್ನ ಮತ್ತೆರಡು ಚಿತ್ರ ‘ಬಾರ್ಬಿ’ ಮತ್ತು ‘ಅವತಾರ್: ದಿ ವೇ ಆಫ್ ವಾಟರ್’ ಕ್ರಮವಾಗಿ 13 ಮತ್ತು 20ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ಕ್ರಿಕೆಟ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಈ ಬಾರಿಯ ಹೆಚ್ಚು ನಿರೀಕ್ಷಿತ 2023 ಕ್ರಿಕೆಟ್ ವಿಶ್ವಕಪ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಸ್ಥಾನದಲ್ಲಿದೆ. ‘ಕ್ರಿಕೆಟ್ ವರ್ಲ್ಡ್ ಕಪ್ 2023’ ಮತ್ತು ‘ಇಂಡಿಯನ್ ಪ್ರೀಮಿಯರ್ ಲೀಗ್’ ಲೇಖನಗಳ ಜೊತೆಗೆ ಅಗ್ರ 5 ವಿಕಿಪೀಡಿಯ ಲೇಖನಗಳು ಒಟ್ಟಾರೆಯಾಗಿ 116.8 ಮಿಲಿಯನ್ ಪುಟ ವೀಕ್ಷಣೆಗಳನ್ನು ಪಡೆದಿವೆ. 2019 ರ ಕ್ರಿಕೆಟ್ ವಿಶ್ವಕಪ್ಗೆ ಹೋಲಿಸಿದರೆ ಈ ವರ್ಷ ಕ್ರಿಕೆಟ್ ಮೇಲಿನ ಆಸಕ್ತಿ ಶೇಕಡಾ 304 ರಷ್ಟು ಹೆಚ್ಚಿದೆ.
“ಪ್ರತಿ ವಿಕಿಪೀಡಿಯ ಲೇಖನವನ್ನು 2,65,000 ಕ್ಕೂ ಹೆಚ್ಚು ಸ್ವಯಂಸೇವಕರ ಜಾಗತಿಕ ಸಮುದಾಯದಿಂದ ಸಂಗ್ರಹಿಸಿ ರಚಿಸಲಾಗುತ್ತದೆ. ಇಂಗ್ಲಿಷ್ ವಿಕಿಪೀಡಿಯಾ ಈ ವರ್ಷವೊಂದರಲ್ಲೇ 84 ಬಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೇ ಈ ವರ್ಷಾಂತ್ಯದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ 25 ಲೇಖನಗಳು 2023 ರಲ್ಲಿ 540.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿವೆ.ಮುಖ್ಯವಾಗಿ ‘ಭಾರತ’ದ ಕುರಿತಾದ ವಿಕಿಪೀಡಿಯ ಲೇಖನ ಹುಡುಕಾಟ 21ನೇ ಸ್ಥಾನದಲ್ಲಿದೆ. ಸುಮಾರು 14 ಮಿಲಿಯನ್ ಪುಟ ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ ಕಾರಣ ಈ ವರ್ಷ ಭಾರತದಲ್ಲಿ ಹಲವಾರು ಸಕಾರಾತ್ಮಕ ಜಾಗತಿಕ ಬೆಳವಣಿಗೆಗಳು. ಭಾರತದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತಲುಪಿಸಿದ ದೇಶವಾಗಿದೆ. ಹಾಗೇ RRR ಸಿನಿಮಾದ ‘ನಾಟು ನಾಟು’ ಹಾಡು ‘ಅತ್ಯುತ್ತಮ ಮೂಲ ಗೀತೆ’ಯಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.