2023 ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್

ಬ್ಯಾಂಕಾಕ್ (ಥಾಯ್ಲೆಂಡ್):  ಥಾಯ್ಲೆಂಡ್​​ ರಾಜಧಾನಿ ಹುವಾಮಾರ್ಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾ ಎದುರಾಳಿಯನ್ನು 21-19, 21-11 ಸೆಟ್‌ಗಳಿಂದ ಸೋಲಿಸಿದರು. ಶನಿವಾರ ಚೀನಾದ ಲು ಗುವಾಂಗ್ ಜು ಮತ್ತು ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಎದುರಾಗುತ್ತಿದ್ದು, ಇದರಲ್ಲಿ ಗೆದ್ದವರ ಜೊತೆ ಲಕ್ಷ್ಯ ಸೇನ್​ ಆಡಲಿದ್ದಾರೆ.

ಲಕ್ಷ್ಯ ಸೇನ್ ಲಿಯಾಂಗ್ ಜುನ್ ಹಾವೊ ವಿರುದ್ಧ ತೀವ್ರ ಪೈಪೋಟಿಯನ್ನು ಎದುರಿಸಿದರು. 10-10ರ ಸಮಬಲದಲ್ಲಿ ಇಬ್ಬರ ಹೋರಾಟ ಮುಂದುವರೆದಿತ್ತು. ನಂತರ ಲಿಯಾಂಗ್ ಜುನ್ ಹಾವೊ ಆರು ಅಂಕಗಳ ಮುನ್ನಡೆ ಪಡೆದುಕೊಂಡರು. ಆದರೆ, ಮುನ್ನಡೆಯನ್ನು ಸೇನ್​ಹೆಚ್ಚುಹೊತ್ತು ಬಿಟ್ಟುಕೊಡದೇ 17-17 ರ ಸಮಬಲ ಸಾಧಿಸಿದರು. ನಂತರ ಮುನ್ನಡೆ ಪಡೆದುಕೊಂಡ ಲಕ್ಷ್ಯ 21-19 ರಿಂದ ಮೊದಲ ಸೆಟ್​ನ್ನು ವಶ ಪಡಿಸಿಕೊಂಡರು.

ಎರಡನೇ ಸೆಟ್​ನಲ್ಲೂ ಇಬ್ಬರ ನಡುವೆ ಆರಂಭದಲ್ಲಿ ತೀವ್ರ ಹೋರಾಟ ನಡೆಯಿತು. 11 ಅಂಕದ ವರೆಗೆ ಲಿಯಾಂಗ್ ಬಿಟ್ಟುಕೊಡದೇ ಆಡಿದರು. ಆದರೆ ನಂತರ ಲಕ್ಷ್ಯ ಸೇನ್​ ಮುನ್ನಡೆ ತೆಗೆದುಕೊಂಡು ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿಕೊಂಡರು. 11ನೇ ಅಂಕದ ನಂತರ ಮಲೇಷ್ಯಾದ ಲಿಯಾಂಗ್ ಜುನ್ ಹಾವೊಗೆ ಯಾವುದೇ ಪಾಯಿಂಟ್​ ಕೊಡದ ಸೇನ್​ ಸೆಮಿಫೈನಲ್‌ಗೆ ಪ್ರವೇಶ ಪಡೆದರು.

ಕಿರಣ್ ಜಾರ್ಜ್ ಥಾಯ್ಲೆಂಡ್ ಓಪನ್‌ನ ಎಂಟರ ಘಟ್ಟವನ್ನು ತಲುಪುವಲ್ಲಿ ಎಡವಿದರು. 23 ವರ್ಷದ ಕಿರಣ್ ಜಾರ್ಜ್, 28ನೇ ಶ್ರೇಯಾಂಕದ ಫ್ರೆಂಚ್ ಆಟಗಾರನ ವಿರುದ್ಧ 41 ನಿಮಿಷಗಳ ಮುಖಾಮುಖಿಯಲ್ಲಿ 16-21, 17-21 ಅಂತರದಲ್ಲಿ ಸೋತರು.

ಒಡಿಶಾ ಓಪನ್ 2022 ವಿಜೇತ ಕಿರಣ್ ಜಾರ್ಜ್ ವಿರುದ್ಧ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ 5-0ಯ ಮುನ್ನಡೆಯನ್ನು ತೆಗೆದುಕೊಂಡರು. ಆದರೆ, ನಂತರ ಕಿರಣ್​ ಅಂತರವನ್ನು 7-6ಕ್ಕೆ ಇಳಿಸಿಕೊಂಡರು. ಆದರೆ, 7 ಅಂಕದಲ್ಲಿ ಕಿರಣ್​ ಇದ್ದಾಗ 3 ಸುಲಭ ಅಂಕಗಳನ್ನು ಪಡೆದ ಪೊಪೊವ್ 10 ಅಂಕದೊಂದಿಗೆ ಮತ್ತೆ ಮುನ್ನಡೆ ಪಡೆದುಕೊಂಡರು. ಪೊಪೊವ್ 17-14 ರಲ್ಲಿ ಮುನ್ನಡೆ ಸಾಧಿಸಿದರು ಮತ್ತು ನಂತರದ ಕೆಲವು ಪಾಯಿಂಟ್‌ಗಳಿಗಾಗಿ ಜಾರ್ಜ್ ಉತ್ತಮವಾಗಿ ಹೋರಾಟ ಮಾಡಿದರಾದರೂ ಫ್ರೆಂಚ್ ಷಟ್ಲರ್ 21-16 ರಿಂದ ಮೊದಲ ಗೇಮ್ ಗೆದ್ದರು.

ಮೊದಲ ಸೆಟ್​ನ ಸೋಲಿನ ನಂತರ ಜಾರ್ಜ್​ ಎರಡನೇ ಸೆಟ್​ನಲ್ಲಿ ಬಿರುಸಿನ ಆಟಕ್ಕೆ ಮುಂದಾದರು. ಆರಂಭದಲ್ಲೇ ಮುನ್ನಡೆ ಕಂಡುಕೊಂಡ ಕಿರಣ್​ 11-8 ರ ಅಂಕದೊಂದಿಗೆ ಮೇಲುಗೈ ಸಾಧಿಸಿದ್ದರು. ಮುಂದುವರೆದು ಆಟ 17-17 ರ ವರೆಗೆ ತೀವ್ರ ಪೈಪೋಟಿಯಲ್ಲಿ ಆಟ ಕಂಡು ಬಂದಿತ್ತು. ಆದರೆ ಕೊನೆ ನಾಲ್ಕು ಅಂಕವನ್ನು ನಿಯಂತ್ರಿಸುವಲ್ಲಿ ಕಿರಣ್​ ಎಡವಿದರು ಇದರಿಂದ ಥಾಯ್ಲೆಂಡ್ ಓಪನ್ 2023 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ ನಿಂದ ಹೊರಗುಳಿಯಬೇಕಾಯಿತು.