ಕಂಬಳ ಕ್ಷೇತ್ರದ ಸಾಧಕ ಇರುವೈಲು ಪಾಣಿಲ ಬಾಡ ಪೂಜಾರಿ ವಿಧಿವಶ

ಮಂಗಳೂರು: ಕಂಬಳ ಕ್ಷೇತ್ರದ ಸಾಧಕ ಯಜಮಾನರಾದ ಇರುವೈಲು ಪಾಣಿಲ ಬಾಡ ಪೂಜಾರಿಯವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನಿಕೆಯ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದವು. ಇವರ ಯಜಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಅಶ್ವಥಪುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಬಾಡ ಪೂಜಾರಿಯವರ ಕೋಣಗಳು ಅನೇಕ ಪದಕಗಳನ್ನು ಹಾಗೂ ದಾಖಲೆಗಳನ್ನು ನಿರ್ಮಿಸಿದ್ದವು.
ಯಕ್ಷ ಸಂಜೀವ ಯಕ್ಷಗಾನ ಕೇಂದ್ರ ಉದ್ಘಾಟನೆ

ಉಡುಪಿ: ಇಲ್ಲಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಉದ್ಘಾಟನಾ ಸಮಾರಂಭವು ಸೋಮವಾರದಂದು ಬುಡ್ನಾರುವಿನಲ್ಲಿ ನಡೆಯಿತು. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮಿಜಿ ಅವರು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಂಜೀವ ಸುವರ್ಣರವರ ಸ್ವಂತಿಕೆಯನ್ನು ಬೆಳೆಸಲು ಎಲ್ಲರೂ ಸಹಕರಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ವಹಿಸಿದ್ದರು. ಸಂಜೀವ ಸುವರ್ಣ ಅವರು ಕೇಂದ್ರದ ಬಗ್ಗೆ ತಮ್ಮ ಮುಂದಿನ ಯೋಜನೆಗಳನ್ನು ತಿಳಿಸಿ ಪೂರ್ವ ಪೀಠಿಕೆಯ ಪ್ರಯೋಗಕ್ಕೆ ಸಹಕರಿಸಿ ಎಂದರು. ಹೇರಂಜೆ ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. […]