ಕೋವಿಡ್ ಹಿನ್ನಲೆ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವ ಮುಂದೂಡಿಕೆ

ಉಡುಪಿ: ರಾಜ್ಯದಲ್ಲಿ ಕೋವಿಡ್-19 ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ಜನಸಾಮಾನ್ಯರ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ 2022 ಜನವರಿ 16 ರಿಂದ 27 ರವರೆಗೆ ನೆರವೇರಬೇಕಿದ್ದ ಅತ್ತೂರು-ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ನವೇನ ಪ್ರಾರ್ಥನೆ ಹಾಗೂ ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಎಂದು ಬಸಿಲಿಕಾದ ನಿರ್ದೇಶಕರಾದ ಆಲ್ಬನ್ ಡಿʼಸೋಜಾ ತಿಳಿಸಿದ್ದಾರೆ. ಮುಂದೂಡಲ್ಪಟ್ಟ ವಾರ್ಷಿಕ ಮಹೋತ್ಸದ ದಿನಗಳನ್ನು ಸೂಕ್ತ ಸಮಯದಲ್ಲಿ ಭಕ್ತಾದಿಗಳಿಗೆ ತಿಳಿಸಲಾಗುವುದು. ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಕಾಪು: ಫ್ಲೈ ಓವರ್ ನಲ್ಲಿ ಅಡಿಕೆ ಸಾಗಾಟದ ಟೆಂಪೋ ಪಲ್ಟಿ; ಚಾಲಕ, ನಿರ್ವಾಹಕ ಪಾರು

ಕಾಪು: ಅಡಿಕೆ ಸಾಗಾಟದ ಟೆಂಪೋ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್ ನಲ್ಲಿ ಪಲ್ಟಿಯಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸಿದ್ದಾಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಟೆಂಪೋದ ಟಯರ್ ಬ್ಲಾಸ್ಟ್ ಆಗಿದ್ದು, ಇದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಫ್ಲೈ ಒವರ್ ನಲ್ಲಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಟೆಂಪೋದಲ್ಲಿದ್ದ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.