2022-24ರ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಬಾಳೆ ಮುಹೂರ್ತ ಸಂಪನ್ನ

ಉಡುಪಿ: 2022-24ರ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಇಂದು ರಥಬೀದಿಯ ಮಠದ ಆವರಣದಲ್ಲಿ ಬಾಳೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಆ ಮೂಲಕ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿಯ ನಾಲ್ಕನೇ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳಿಗೆ ಪ್ರಥಮ ಹಂತದಲ್ಲಿ ಚಾಲನೆ ನೀಡಲಾಯಿತು.

ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಭಕ್ತರು ಬಾಳೆಗಿಡಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಕೃಷ್ಣಮುಖ್ಯಪ್ರಾಣನ ಜತೆಗೆ ಅನಂತೇಶ್ವರ, ಚಂದ್ರಮೌಳೇಶ್ವರ ಸನ್ನಿದಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.

ಬಳಿಕ ಕೃಷ್ಣಾಪುರ ಮಠಕ್ಕೆ ಆಗಮಿಸಿ ದೇವರ ಪ್ರಸಾದದೊಂದಿಗೆ ವಾದ್ಯ, ವೇದ, ಮಂಗಳ ಘೋಷದೊಂದಿಗೆ ಬಾಳೆಗಿಡ, ತುಳಸಿ ಗಿಡ, ಕಬ್ಬು ಹಾಗೂ ತರಕಾರಿ ಗಿಡಗಳನ್ನು ಶುದ್ಧೀಕರಿಸಿ ನಿಗದಿತ ಸ್ಥಳದಲ್ಲಿ ಬಾಳೆ ಗಿಡಗಳನ್ನು ನೆಡಲಾಯಿತು.
ಹೀಗೆ ತಮ್ಮ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ಬೇಕಾಗುವ ಬಾಳೆ ಎಲೆಗಾಗಿ ಗಿಡಗಳನ್ನು, ದೇವರ ಅರ್ಚನೆಗಾಗಿ ತುಳಸಿ ಗಿಡಗಳನ್ನು ನೆಡುವ ಮೂಲಕ ಮೊದಲ ಮುಹೂರ್ತ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಕಾಣಿಯೂರು ಮಠದ ದಿವಾನ ರಘುಪತಿ ಆಚಾರ್ಯ, ಯಶ್ಪಾಲ್ ಸುವರ್ಣ, ರಾಘವೇಂದ್ರ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ವಿದ್ಯಾಸಾಗರ ಶ್ರೀಗಳಿಗೆ 4ನೇ ಪರ್ಯಾಯ:
ಕೃಷ್ಣಾಪುರದ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದರು. 2022-23ರ ಅವಧಿಗೆ ಅವರು ನಾಲ್ಕನೇ ಬಾರಿಗೆ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಆಶ್ರಮ ಜ್ಯೇಷ್ಠರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು ಕೃಷ್ಣನ ಪಾದ ಸೇರಿದ ಬಳಿಕ ವಿದ್ಯಾಸಾಗರತೀರ್ಥ ಸ್ವಾಮೀಜಿಯೇ ಆಶ್ರಮ ಜ್ಯೇಷ್ಠರಾಗಲಿದ್ದಾರೆ.