ಬೆಂಗಳೂರು : 2019ರ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ಕಿಚ್ಚ ಸುದೀಪ್ ಮತ್ತು ಅನುಪಮಾ ಗೌಡ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪಿ.ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವಿಭಾಗದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 1ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನ ಪದಕ ನೀಡಲಾಗುವುದು.
ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಲವ್ ಮಾಕ್ ಟೈಲ್’ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 75 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು. ಮೂರನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಅಘ್ರ್ಯಂ’ ಚಿತ್ರ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ‘ಕನ್ನೇರಿ’ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 75 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ‘ಇಂಡಿಯಾ ವರ್ಸ್‍ಸ್ ಇಂಗ್ಲೆಂಡ್’ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.
ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಚಿತ್ರ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು. ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ‘ಗೋಪಾಲಗಾಂಧಿ’ ಚಿತ್ರ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.
ಅತ್ಯತ್ತಮ ನಟ ವಿಭಾಗದಲ್ಲಿ ನೀಡುವ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ಆತ್ಯುತ್ತಮ ನಟಿ ಪ್ರಶಸ್ತಿಗೆ ತ್ರಯಂಬಕಂ ಚಿತ್ರದಲ್ಲಿನ ನಟನೆಗಾಗಿ ಅನುಪಮಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಪೋಷಕ ನಟ ವಿಭಾಗದಲ್ಲಿ ನೀಡುವ ಕೆ.ಎಸ್.ಅಶ್ವಥ್ ಪ್ರಶಸ್ತಿಗೆ ಕೆಮಿಸ್ಟ್ರಿ ಆಪ್ ಕರಿಯಪ್ಪ ಚಿತ್ರದಲ್ಲಿ ನಟನೆಗಾಗಿ ತಬಲ ನಾಣಿ ಅವರನ್ನು ಆಯ್ಕೆ ಮಾಡಲಾಗಿದೆ. ಪೋಷಕ ನಟಿ ಪ್ರಶಸ್ತಿಗೆ ಬ್ರಾಹ್ಮಿ ಚಿತ್ರದ ಅನೂಷಾ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಕತೆ ಪ್ರಶಸ್ತಿಗೆ ಜಯಂತ್ ಕಾಯ್ಕಿಣಿ ಅವರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರ ಆಯ್ಕೆಯಾಗಿದೆ.
ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ನೀಡುವ ಪ್ರಶಸ್ತಿಗೆ ಲವ್ ಮಾಕ್ ಟೈಲ್‍ನ ಡಾರ್ಲಿಂಗ್ ಕೃಷ್ಣ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಸಂಭಾಷಣೆಗಾಗಿ ನೀಡುವ ಪ್ರಶಸ್ತಿಗೆ ಅಮೃತಮತಿ ಚಿತ್ರದ ಬರುಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಯಜಮಾನ ಚಿತ್ರಕ್ಕಾಗಿ ವಿ.ಹರಿಕೃಷ್ಣ ಅವರಿಗೆ ನೀಡಲಾಗಿದೆ. ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಝಾನ್ಸಿ ಐಪಿಎಸ್ ಚಿತ್ರದ ಎಡಿಟರ್ ಜಿ. ಬಸವರಾಜ್ ಅರಸ್, ಅತ್ಯುತ್ತಮ ಬಾಲ ನಟ ಪ್ರಶಸ್ತಿಗೆ ಮಿಂಚುಹುಳ ಚಿತ್ರ ಮಾಸ್ಟರ್ ಪ್ರೀತಂ, ಬಾಲ ನಟಿ ಪ್ರಶಸ್ತಿಗೆ ಸುಗಂಧಿ ಚಿತ್ರದ ಬೇಬಿ ವೈಷ್ಣವಿ ಅಡಿಗ, ಕಲಾ ನಿರ್ದೇಶನ ಪ್ರಶಸ್ತಿಗೆ ಮೋಹನದಾಸ್ ಚಿತ್ರದ ಹೊಸ್ಮನೆ ಮೂರ್ತಿ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಗೀತ ರಚನೆಗಾಗಿ ಪೆನ್ಸಿಲ್ ಬಾಕ್ಸ್ ಚಿತ್ರದ ರಝಾಕ್ ಪುತ್ತೂರು, ಹಿನ್ನೆಲೆ ಗಾಯಕ ಪ್ರಶಸ್ತಿಗೆ ಲವ್ ಮಾಕ್ ಟೈಲ್‍ನ ರಘು ದೀಕ್ಷಿತ್, ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ರಾಗಭೈರವಿ ಚಿತ್ರದ ಡಾ. ಜಯದೇವಿ ಜಿಂಗಮ ಶೆಟ್ಟಿ, ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಗೆ ಮಕ್ಕಡ್ ಮನಸ್ ಚಿತ್ರದ ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ.
ತೀರ್ಪುಗಾರರ ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಅಮೃತಮತಿ ಹಾಗೂ ತಮಟೆ ನರಸಿಂಹಯ್ಯ ಚಿತ್ರಗಳು ಆಯ್ಕೆಯಾಗಿದ್ದು, ಚಿತ್ರ ನಿರ್ಮಾಪಕರು ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ. ಅತ್ಯುತ್ತಮ ಚಿತ್ರ ನಟ ಪ್ರಶಸ್ತಿ ಸಹಿತ ಉಳಿದ ಎಲ್ಲ ಪ್ರಶಸ್ತಿಗಳು ಇಪ್ಪತ್ತು ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ.
2019ನೆ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಟ್ಟು 180 ಚಲನಚಿತ್ರಗಳು ಅರ್ಜಿ ಸಲ್ಲಿಸಿದ್ದವು. ಆ ಪೈಕಿ 8 ಚಲನಚಿತ್ರ ಹೊತುಪಡಿಸಿ, 172 ಚಲನಚಿತ್ರಗಳನ್ನು ಮಾತ್ರ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಸಮಿತಿ ವರದಿ ನೀಡಿದ್ದು, ಅದರಂತೆ ಸರಕಾರ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಬ್ಯಾರಿ ಭಾಷೆಯ ‘ಟ್ರಿಬಲ್ ತಲಾಕ್’ ಚಿತ್ರಕ್ಕೆ ಪ್ರಶಸ್ತಿ: ಅತ್ಯುತ್ತಮ ಕರ್ನಾಟಕ ಪ್ರದೇಶಿಕ ಭಾಷಾ ಚಿತ್ರ ವಿಭಾಗದಲ್ಲಿ ಬ್ಯಾರಿ ಭಾಷೆಯ ‘ಟ್ರಿಬಲ್ ತಲಾಕ್’ ಚಿತ್ರವು ಆಯ್ಕೆಯಾಗಿದೆ. ಚಿತ್ರವನ್ನು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನ ಮಾಡಿದ್ದು, ಸ್ವತಃ ಅವರೇ ಗುಲ್ವಾಡಿ ಟಾಕೀಸ್ ಸಂಸ್ಥೆ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ವಿಭಾಗದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.