ಉಡುಪಿ: ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಇದೀಗ ರಾಷ್ಟ್ರಮಟ್ಟಕ್ಕೂ ತಲುಪಿದೆ ಎಂದು ಹೇಳಲು ಕರಾವಳಿಗರಾದ ನಮಗೆ ಹೆಮ್ಮೆಯಾಗುತ್ತದೆ. ಅದನ್ನು ಪರಿಚಯಿಸುವಲ್ಲಿ ಶ್ರಮಿಸುವುದು ಉಡುಪಿಯ ಯಕ್ಷಗಾನ ಕೇಂದ್ರವಾಗಿದೆ.
ಉಡುಪಿಯ ಯಕ್ಷಗಾನ ಕೇಂದ್ರ ಈಗಾಗಲೇ ಯಶಸ್ವಿಯಾಗಿ 50 ವರ್ಷವನ್ನು ಪೂರೈಸಿ, ಸಾಕಷ್ಟು ಏಳು – ಬೀಳುಗಳನ್ನು ಕಂಡಿದೆ. ಸದಾ ಕ್ರಿಯಾಶೀಲವಾಗಿರುವ ಈ ಕೇಂದ್ರದಲ್ಲಿ ಯಾವಾಗಲೂ ತಾಳದ ಸದ್ದು ಕೇಳುತ್ತಲೆ ಇರುತ್ತದೆ.
6 ರಿಂದ ಹಿಡಿದು 60 ಪ್ರಾಯದವರು ಕೂಡ ಇಲ್ಲಿ ಬಂದು ಗುರುಗಳ ತಾಳಕ್ಕೆ ಹೆಜ್ಜೆ ಹಾಕುತ್ತಾರೆ. ಗುರುಕುಲ ಶಿಕ್ಷಣ ಪದ್ದತಿಯಂತೆ ಇಲ್ಲಿನ ಮಕ್ಕಳಿಗೆ ದಿನನಿತ್ಯ ಯಕ್ಷಗಾನ ತರಗತಿ ನಡೆಯುತ್ತವೆ.
ಇದೀಗ ವಾರಣಾಸಿಯ ನಾಟ್ಯ ವಿದ್ಯಾಲಯದ 20 ವಿದ್ಯಾರ್ಥಿಗಳಿಗೂ ಯಕ್ಷಗಾನ ತರಬೇತಿ ನಡೆಯುತ್ತಿದೆ. ಕೆಲ ವರ್ಷಗಳಿಂದ ಗುರುಗಳು ಅಲ್ಲಿಗೆ ಹೋಗಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿದ್ದಾರೆ.
ಆದರೆ ಈ ವರ್ಷ ಅಲ್ಲಿನ ವಿದ್ಯಾರ್ಥಿಗಳೇ ಇಲ್ಲಿಗೆ ಬಂದು ಗುರುಗಳಿಂದ ಯಕ್ಷಗಾನವನ್ನು ಕರಗತಮಾಡಿಕೊಳ್ಳುತ್ತಿದ್ದಾರೆ.
ರಾಷ್ಟ್ರ ಮಟ್ಟದ ಶಿಬಿರ:
ಈಗಾಗಲೇ 2021 ರಲ್ಲಿ ಉಚಿತವಾದ ಎರಡು ರಾಷ್ಟ್ರಮಟ್ಟದ ಶಿಬಿರಗಳು ಯಶಸ್ವಿಯಾಗಿ ಮುಗಿದಿದ್ದು, ಅವುಗಳಲ್ಲಿ 26 ರಾಜ್ಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೇಂದ್ರದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ, ಕೃಷ್ಣಮೂರ್ತಿ ಭಟ್, ಶ್ರೀಧರ್ ಹೆಗ್ಡೆ ಹಾಗೂ ರೋಹಿತ್, ನಿಶ್ವಲ್, ಶಂತನು, ಇವರು ತಮ್ಮ ಸಂಪೂರ್ಣ ಸಮಯವನ್ನು ತರಬೇತಿಗಾಗಿ ಮಿಸಾಲಿಟ್ಟಿದ್ದಾರೆ. ಹಾಗೂ ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ, ರಾಮ್ ಜಿ, ಬಾಲಿ ನೇತೃತ್ವದಲ್ಲಿ ವಾರಣಾಸಿಯಿಂದ ಉಡುಪಿಗೆ ಬಂದ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದಾರೆ.